ಕ್ರಿಕೆಟ್ ಮಾದರಿಯಲ್ಲೇ ಬಾಸ್ಕೆಟ್ ಬಾಲ್ ಕ್ರೀಡೆಗೂ ಪ್ರೋತ್ಸಾಹ ಅಗತ್ಯ- ಡಾ. ಎಚ್.ಎಸ್ ಬಲ್ಲಾಳ್
Monday, April 20, 2026
ಕ್ರಿಕೆಟ್ ಮಾದರಿಯಲ್ಲೇ ಬಾಸ್ಕೆಟ್ ಬಾಲ್ ಕ್ರೀಡೆಗೂ ಪ್ರೋತ್ಸಾಹದ ಅಗತ್ಯ ಇದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಎಚ್ .ಎಸ್ ಬಲ್ಲಾಳ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನಿಂದ ಅಧಿಕೃತ ಮಾನ್ಯತೆ ಪಡೆದ ನೂತನ ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಗೆ ಮಣಿಪಾಲದ ಮಾಧವ ಕೃಪಾ ಶಾಲೆಯ ಆವರಣದಲ್ಲಿ ಚಾಲನೆ ನೀಡಿ ಲೋಗೋ ಅನಾವರಣಗೊಳಿಸಿ ಮಾತನಾಡಿದರು. ,ಪ್ರಸಾದ್ ರಾಜ್ ಕಾಂಚನ್ ಉತ್ತಮ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ನಮ್ಮ ಪೂರ್ಣ ಸಹಕಾರ ಇದೆ.ಕ್ರಿಕೆಟ್ ಗೆ ಮಾತ್ರ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅದು ಸರಿಯಲ್ಲ. ಬಾಸ್ಕೆಟ್ ಬಾಲ್ ಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಮಾಹೆಯ ಮರೀನಾ ಮತ್ತು ಎಂಐಟಿಯ ಸುಸಜ್ಜಿತ ಬಾಸ್ಕೆಟ್ ಬಾಲ್ ಕ್ರೀಡಾಂಗಣ ಇದೆ. ಈಗ ಮಾಧವಕೃಪಾ ಶಾಲೆಯವರು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಅವಕಾಶ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಈ ಕ್ರೀಡೆಗೆ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಷನ್ ನೂತನ ಜಿಲ್ಲಾ ಅಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ , ನಗರ ಮಾತ್ರವಲ್ಲ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.ಉಡುಪಿಯಲ್ಲಿ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಸ್ಟೇಡಿಯಂ ನಿರ್ಮಿಸಿ, ಆರು ತಿಂಗಳಲ್ಲಿ ರಾಜ್ಯಮಟ್ಟದ ಟೂರ್ನಮೆಂಟ್ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು. ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಸುಮಾರು 160 ಕ್ಕೂ ಹೆಚ್ಚು ಮಕ್ಕಳು ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಮಾಹೆಯ ಜೊತೆಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಸಿದ್ಧಗೊಳಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕಳಿಸುವ ಯೋಚನೆ ಇದೆ. ನಮಗೆ ರಾಜ್ಯ ಎಸೋಸಿಯೇಷನ್ ತುಂಬ ಸಹಕಾರ ನೀಡಿದೆ.ತಕ್ಷಣ ಮಾನ್ಯತೆಯನ್ನೂ ಕೊಟ್ಟಿದ್ದು ಇಲ್ಲಿಯ ಪ್ರತಿಭಾವಂತ ಮಕ್ಕಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಗಾರ ಜುಗನ್ ಎಸ್ ದ್ಯಾನೇಶ್ವರನ್ , ಮಾಹೆ ನನಗೆ ಒಳ್ಳೆಯ ಸಹಕಾರ ನೀಡಿದೆ.ಇದು ನನ್ನ ಎರಡನೇ ಮನೆ ಇದ್ದಂತೆ.ಟೂರ್ನಮೆಂಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಭಾಗವಹಿಸಿರುವುದು ನೋಡಿ ಖುಷಿ ಆಯಿತು.ಈ ಭಾಗದಿಂದ 10 - 15 ಪ್ರತಿಭಾವಂತ ಮಕ್ಕಳು ದೇಶದ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಬೇಕು ಎಂದರು. ಸಭಾ ಕಾರ್ಯಕ್ರಮ ಬಳಿಕ ಮಣಿಪಾಲದ ಮಾಧವ ಕೃಪಾ ಶಾಲೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟಗಳಿಗೆ ಚಾಲನೆ ನೀಡಲಾಯಿತು.
ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ, ಚಂದ್ರಶೇಖರ್ ಪ್ರಭು ,ಎ . ಕೆ ಹುಸೇನ್, ವಿನಯ್ ಮೊಯ್ಲಿ , ನೂತನ ಅಸೋಸಿಯೇಷನ್ ನ ಪದಾಧಿಕಾರಿಗಳು, ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


