-->
ಬಿಸಿಲ ತಾಪಕ್ಕೆ ಮತ್ಸ್ಯ ಬೇಟೆ ಕ್ಷೀಣ: ಮೀನುಗಾರರಿಗೆ ಸಂಕಷ್ಟ

ಬಿಸಿಲ ತಾಪಕ್ಕೆ ಮತ್ಸ್ಯ ಬೇಟೆ ಕ್ಷೀಣ: ಮೀನುಗಾರರಿಗೆ ಸಂಕಷ್ಟ


ಕರಾವಳಿಯಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನವು ಹೆಚ್ಚಾಗಿದ್ದು, ಮೀನುಗಾರಿಕೆಯ ಮೇಲೂ ಬಹುದೊಡ್ಡ ಹೊಡೆತ ಬಿದ್ದಿದೆ. ಸಮುದ್ರದ ಮೇಲ್ಮೈ ತಾಪಮಾನ ಏರಿಕೆಯಿಂದಾಗಿ ಮೀನುಗಳ ಸಂಚಾರದಲ್ಲಿ ಬದಲಾವಣೆ ಕಂಡುಬರುತ್ತಿದೆ. ಇದರಿಂದ ಮೀನುಗಾರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ಆರ್ಥಿಕ ನಷ್ಟ ಉಂಟಾಗುತ್ತಿದೆ.


ಮುಂಗಾರು ಮೀನುಗಾರಿಕಾ ನಿಷೇಧ ಅವಧಿ ಆರಂಭವಾಗಲು ಇನ್ನೂ ಒಂದು ತಿಂಗಳ ಕಾಲಾವಕಾಶವಿದೆ. ಅದಕ್ಕೂ ಮುನ್ನವೇ ಮಲ್ಪೆ ಬಂದರಿನಲ್ಲಿ ಹಲವಾರು ಬೋಟುಗಳು ಮೀನುಗಾರಿಕೆಗೆ ತೆರಳದೇ ಲಂಗರು ಹಾಕಿವೆ. ಒಂದೆಡೆ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಮೀನುಗಾರರು ಸಾವಿರಾರು ರೂಪಾಯಿಯ ಇಂಧನವನ್ನು ಬೋಟ್ ಗಳಿಗೆ ಹಾಕಿ ಮೀನುಗಾರಿಕೆಗೆ ತೆರಳಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಗುತ್ತಿಲ್ಲ. ತಾಪಮಾನ ಏರಿಕೆ ಮತ್ತು ಸಮುದ್ರದ ನೀರಿನ ಉಷ್ಣಾಂಶ ಹೆಚ್ಚಳದಿಂದ ಸಮುದ್ರ ಜೀವವೈವಿಧ್ಯತೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಇದರಿಂದ ಮತ್ಸ್ಯಕ್ಷಾಮ ಉಂಟಾಗಿದೆ.ಕೆಲವು ಮೀನು ಪ್ರಭೇದಗಳು ಆಳವಾದ ನೀರಿಗೆ ಸರಿಯುತ್ತಿವೆ. ಇದರಿಂದ ಸಣ್ಣ ಹಡಗುಗಳನ್ನು ಹೊಂದಿರುವ ಮೀನುಗಾರರಿಗೆ ಹೆಚ್ಚು ಸಂಕಷ್ಟ ಎದುರಾಗುತ್ತಿದೆ. ಮೀನುಗಳ ಲಭ್ಯತೆ ಕಡಿಮೆಯಾಗಿರುವುದರಿಂದ ಮೀನುಗಾರರ ಆದಾಯವೂ ಕುಂಠಿತಗೊಂಡಿದೆ.


ಮಲ್ಪೆ, ಕುಂದಾಪುರ ಗಂಗೊಳ್ಳಿ, ಬೈಂದೂರು ಮೊದಲಾದ ಪ್ರಮುಖ ಬಂದರುಗಳಲ್ಲಿ ಚಟುವಟಿಕೆಗಳು ಗಣನೀಯವಾಗಿ ಕುಗ್ಗಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೇವಲ ಶೇ.15ರಷ್ಟು ಬೋಟ್‌ಗಳು ಮಾತ್ರ ಸಮುದ್ರಕ್ಕೆ ತೆರಳುತ್ತಿದ್ದು, ಉಳಿದ ಶೇ.85 ರಷ್ಟು ಬೋಟ್‌ಗಳು ದಡದಲ್ಲೇ ನಿಂತಿವೆ. ಇದರಿಂದ ಮೀನುಗಾರರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ಮೀನುಗಾರಿಕಾ ವಲಯದಲ್ಲಿ ಆರ್ಥಿಕ ಅನಿಶ್ಚಿತತೆ ಹೆಚ್ಚಾಗಿದೆ.

ಒಟ್ಟಿನಲ್ಲಿ ಪರಿಸರ ಬದಲಾವಣೆ, ಇಂಧನ ಸಮಸ್ಯೆ ಮತ್ತು ಮತ್ಸ್ಯಕ್ಷಾಮಗಳ ಒತ್ತಡದಿಂದ ಕರಾವಳಿಯ ಮೀನುಗಾರಿಕಾ ವಲಯ ತೀವ್ರ ಸಂಕಷ್ಟದ ಹಂತವನ್ನು ಎದುರಿಸುತ್ತಿದೆ.  

Ads on article

Advertise in articles 1

advertising articles 2

Advertise under the article