2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಪ್ರದಾನ
ಮಾಹೆ ಆಡಳಿತಕ್ಕೊಳಪಟ್ಟಿರುವ ಜಾನಪದ ರಂಗ ಕಲೆಗಳ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿರುವ ಯಕ್ಷಗಾನದ ಅಪರೂಪದ ದಾಖಲೀಕರಣವನ್ನು ಶೀಘ್ರವೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಮೂಲಕ ಜನಸಾಮಾನ್ಯರಿಗೂ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಇಂದು ಸಂಜೆ ಆಯೋಜಿಸಲಾದ 2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.ಆರ್‌ಆರ್‌ಸಿಯಲ್ಲಿ ಯಕ್ಷಗಾನವೂ ಸೇರಿದಂತೆ ವಿವಿಧ ಜಾನಪದ ಕಲೆಗಳ ಸಂರಕ್ಷಣೆ, ದಾಖಲೀಕರಣವು ವಿವಿಧ ರೂಪದಲ್ಲಿ -ಪೋಟೊಗಳು, ಕ್ಯಾಸೆಟ್, ವೀಡಿಯೋ ಮತ್ತು ಸ್ವೈಡ್‌ಗಳಲ್ಲಿ- ನಡೆಯುತಿದ್ದು, ಸದ್ಯ ಸಂಶೋಧಕರಿಗೆ ಇವುಗಳು ಲಭ್ಯವಿದೆ. ಯೂಟ್ಯೂಬ್‌ನಲ್ಲಿ ಇವುಗಳನ್ನು ಅಪ್‌ಲೋಡ್ ಮಾಡಿದಾಗ ಆಸಕ್ತರು ಸೇರಿದಂತೆ ಜನ ಸಾಮಾನ್ಯರಿಗೂ ಇವುಗಳ ಮಾಹಿತಿ ತಲುಪುವಂತೆ ಮಾಡಲಾಗುವುದು ಎಂದರು.
ಯಕ್ಷಗಾನ ಅಕಾಡೆಮಿ ಪ್ರಕಟಿಸಿದ ‘ಶೇಣಿ ಭಾರತ’ ಸೇರಿದಂತೆ ಎರಡು ಪುಸ್ತಕಗಳನ್ನು ಸಹ ಡಾ.ಎಚ್.ಎಸ್. ಬಲ್ಲಾಳ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರು.ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಕಿರುಪರಿಚಯದ ಪುಸ್ತಕವನ್ನು ಬಿಡುಗಡೆಗೊಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಮಾತನಾಡಿ, ನಾಡಿನ ಅತ್ಯುತ್ತಮ ಕಲಾ ವಿದರನ್ನು ಗುರುತಿಸಿ ಆಯ್ಕೆ ಮಾಡುವ ಮೂಲಕ ಯಕ್ಷಗಾನ ಅಕಾಡೆಮಿ ಅವರಿಗೆ ಪ್ರೋತ್ಸಾಹಿಸುವ ಉತ್ತಮ ಕೆಲಸ ಮಾಡಿದೆ ಎಂದರು.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ ಅವರು ಮಾತನಾಡಿ, ಇಂದು ಕಲಾವಿದರಲ್ಲಿ ಮೂಡುವ ಹೊಸ ಹೊಸ ಕಲ್ಪನೆಗಳು ಯಕ್ಷಗಾನ ಕಲೆಗೆ ಮಾರಕವಾಗುತ್ತಿವೆ. ಆದ್ದರಿಂದ ಆರ್‌ಆರ್‌ಸಿಯಲ್ಲಿ ಲಭ್ಯವಿರುವ ಅರ್ಧ ಶತಮಾನದ ಯಕ್ಷಗಾನ ದಾಖಲೀಕರಣ ಜನಸಾಮಾನ್ಯರ ವೀಕ್ಷಣೆಗೆ ದೊರೆತು ಅವರು ಜಾಗೃತಿಗೊಳ್ಳುವಂತಾಗಬೇಕು. ಅಕಾಡೆಮಿ ಯಕ್ಷಗಾನವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ಸಂಶೋಧಕ, ಪ್ರಸಂಗಕರ್ತ, ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಅವರಿಗೆ ಒಂದು ಲಕ್ಷ ರೂ. ಗೌರವ ಧನದೊಂದಿಗೆ ಪ್ರದಾನ ಮಾಡಲಾಯಿತು.
ಅಲ್ಲದೇ ತಲಾ 50,000ರೂ.ನಗದು ಬಹುಮಾನವನ್ನೊಳಗೊಂಡ 2025ನೇ ಸಾಲಿನ ಗೌರವ ಪ್ರಶಸ್ತಿಯನ್ನು ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಮಂಜಪ್ಪ ಆಚಾರಿ,ಡಿ.ಮನೋಹರ್ ಕುಮಾರ್, ಮುರಲಿ ಕಡೆಕಾರ್ ಹಾಗೂ ಮೂಡಲಪಾಯ ಯಕ್ಷಗಾನದ ರಮೇಶ್ ಅವರಿಗೆ ಪ್ರದಾನ ಮಾಡಲಾಯಿತು.
ತಲಾ 25,000ರೂ.ನಗದು ಬಹುಮಾನವನ್ನೊಳಗೊಂಡ 2025ನೇ ಸಾಲಿನ ಯಕ್ಷಸಿರಿ ಪ್ರಶಸ್ತಿಯನ್ನು 10 ಮಂದಿ ಕಲಾವಿದರಿಗೆ ಪ್ರದಾನ ಮಾಡಲಾಯಿತು. ಕುಂದಾಪುರದ ದೇವದಾಸ ರಾವ್ ಕೊಡ್ಲಿ ಇವರಿಗೆ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಿದರೆ, ಮೂವರು 2024ನೇ ಸಾಲಿನ ಪುಸಕ್ತ ಬಹುಮಾನವನ್ನು ಪಡೆದರು.ಕಾರ್ಯಕ್ರಮದಲ್ಲಿ ಕಳೆದೊಂದು ವರ್ಷದಲ್ಲಿ ನಿಧನರಾದ ಯಕ್ಷಗಾನ ಕಲಾವಿದರಾದ ಕೆ.ಗೋವಿಂದ ಭಟ್, ಕಂದಾವರ ರಘುರಾಮ ಶೆಟ್ಟಿ, ಗಣೇಶ್ ಕೊಲೆಕಾಡಿ ಹಾಗೂ ಸುಜನಾ ಸುಳ್ಯ ಇವರ ಸಂಸ್ಮರಣೆ ಮಾಡಲಾಯಿತು.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಲ್ಪೆ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ.ಬಂಗೇರ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತ ಎನ್. ಅತಿಥಿಗಳನ್ನು ಸ್ವಾಗತಿಸಿದರೆ, ಅಕಾಡೆಮಿ ಸದಸ್ಯ ರಾಘವ ಎಚ್. ಕಾರ್ಯಕ್ರಮ ನಿರೂಪಿಸಿದರು.
