ಮೇ.31ರಂದು ಕಿದಿಯೂರು ಮಧುಶ್ರೀ ಪ್ರಕಾಶನದ ನಲ್ವತ್ತನೇ ವರ್ಷದ ಸಂಭ್ರಮ
ತುಳುಕೂಟ ಉಡುಪಿ (ರಿ.) ಮತ್ತು ವಿಶ್ವಪ್ರಭ ಪ್ರತಿಷ್ಠಾನ ಜಂಟಿ ಸಹಯೋಗದಲ್ಲಿ ಕಿದಿಯೂರು ಮಧುಶ್ರೀ ಪ್ರಕಾಶನದ ನಲ್ವತ್ತನೇ ವರ್ಷದ ಸಂಭ್ರಮ ಮೇ.31ರಂದು ಭಾನುವಾರ ಸಂಜೆ 3-30ಕ್ಕೆ ಉಡುಪಿ ಕಿದಿಯೂರು ಹೋಟೇಲಿನ ಅನಂತಶಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
40 ವರ್ಷದ ಹಿಂದೆ ಉಡುಪಿಯಲ್ಲಿ ಆರಂಭಗೊಂಡ ಮಧುಶ್ರೀ ಪ್ರಕಾಶನ ಸಂಸ್ಥೆಯು ಉಡುಪಿ ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಅವರ ಕನಸಿನಕೂಸಾಗಿದೆ. ತುಳು ರಂಗಭೂಮಿ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರು ಅತೀವ ಆಸಕ್ತಿ ಹೊಂದಿದ್ದ ಕಾರಣ ಮಧುಶ್ರೀ ಪ್ರಕಾಶನವನ್ನು ಹುಟ್ಟುಹಾಕಲು ಕಾರಣವಾಯಿತು. 1987ರಲ್ಲಿ ಮಿತ್ರರಾದ ಆರ್.ಕೆ.ಟೈಲರ್ ಅವರ ಟೈಲರಿಂಗ್ ಅಂಗಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರ ಮಿತ್ರರಾದ ನ್ಯಾಯವಾದಿ ಭಾಸ್ಕರ್ ಅವರು ಮಧುಶ್ರೀ ಪ್ರಕಾಶನವನ್ನು ಉದ್ಘಾಟಿಸಿದರು. ಈ ಸಂಸ್ಥೆಯ ಮೂಲಕ ಇವರ ಹಲವು ನಾಟಕ ಕೃತಿಗಳು ಪ್ರಕಟನೆಗೊಂಡವು. ಮಾತ್ರವಲ್ಲದೆ ಇತರ ಬರಹಗಾರರ ಒಟ್ಟು 40 ವಿವಿಧ ಪುಸ್ತಕಗಳನ್ನು ಪ್ರಕಾಶನಕ್ಕೆ ತರುವ ಮೂಲಕ ಈ ಸಂಸ್ಥೆಯು ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವಂತಾಯಿತು. ಗಂಗಾಧರ್ ಅವರ ಕೃತಿಗಳು ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ತುಳುಸಮ್ಮೇಳನ, ತುಳುಕೂಟ ಉಡುಪಿ, ಬೈದಶ್ರೀ ಸಂಶೋಧನಾ ಕೇಂದ್ರ ಅದಿಉಡುಪಿ ಮೂಲಕವೂ ಪ್ರಕಟನೆಗೊಂಡಿವೆ. ಮಧುಶ್ರೀ ಪ್ರಕಾಶನವು ದಶಮಾನೋತ್ಸವ, ವಿಂಶತಿ ಉತ್ಸವ, ಬೆಳ್ಳಿಹಬ್ಬ, ತ್ರಿಂಶತಿ ಹಬ್ಬವನ್ನು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಆಚರಿಸಿದ್ದು, ಇದೀಗ 40ನೇ ವರ್ಷದ ಸಡಗರ ಸಂಭ್ರಮದಲ್ಲಿದೆ.
ಉಡುಪಿಯ ಹಿರಿಯ ಉದ್ಯಮಿ ಯು. ವಿಶ್ವನಾಥ ಶೆಣೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭ ಮೀರ್‌ಮಾರ್ ಗೋವಾದ ನಿವೃತ್ತ ಉಪಪ್ರಾಂಶುಪಾಲರಾದ ಎಸ್.ಎನ್.ಡಿ. ಪೂಜಾರಿ ಅವರು ಬರೆದಿರುವ 'ತುಳುವ ದೈವ ಸಂಪ್ರದಾಯ' ಅಧ್ಯಯನ ಗ್ರಂಥವನ್ನು ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಬಿಡುಗಡೆ ಮಾಡುವರು. ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಪುಸ್ತಕ ಪರಿಚಯ ಮಾಡಲಿರುವರು ಎಂದರು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ತುಳುಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಮಧುಶ್ರೀ ಪ್ರಕಾಶನದ ಮುಖ್ಯಸ್ಥ, ಸಾಹಿತಿ ಗಂಗಾಧರ ಕಿದಿಯೂರು ಅವರು ಬರೆದಿರುವ 'ಪಿಂಗಾರದ ಬಾಲೆ ಸಿರಿ' ತುಳು ನಾಟಕದ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಜಾನಪದ ವಿದ್ವಾಂಸರಾದ ಡಾ. ಗಣೇಶ್ ಅಮಿನ್ ಸಂಕಮಾರ್ ಅವರು ಬಿಡುಗಡೆ ಮಾಡಲಿರುವರು. ಈ ಕೃತಿಯನ್ನು ಎಸ್.ಎನ್.ಡಿ. ಪೂಜಾರಿ ಅವರು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಪುಸ್ತಕ ಪರಿಚಯ ಮಾಡಲಿದ್ದಾರೆ ಎಂದರು.
ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಎಲ್. ಸಾಮಗ, ನಿವೃತ್ತ ಶಿಕ್ಷಕರಾದ ಸರಳಾ ಶೆಟ್ಟಿ, ಧನಲಕ್ಷ್ಮೀ, ಮುತ್ತಕ್ಕ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ ಪಿತ್ತೋಡಿ, ಸಂಹಿತಾ ಜಿ. ಪಿ., ಯಶಸ್ ಪಿ.ಸುವರ್ಣ ಕಟ= ಶಾರ್ವರಿ ಯು. ಅಂಚನ್, ಆದ್ಯ ಶ್ರೀನಾಥ್, ಅದಿತಿ ಶ್ರೀನಾಥ್, ಸಮರ್ಥ ಎಂ. ಸಿ, ತನ್ವಿ ಎಂ. ಕಿದಿಯೂರು, ವೈಷ್ಣವಿ ವಿಶ್ವನಾಥ್ ಆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಘಸಂಸ್ಥೆಗಳಿಗೆ ಗೌರವಾರ್ಪಣೆ: ಇದೇ ಸಂದರ್ಭದಲ್ಲಿ ಮಧುಶ್ರೀ ಪ್ರಕಾಶನದೊಂದಿಗೆ ಬೆನ್ನೆಲುಬಾಗಿ ನಿಂತಿರುವ ಸಂಘಸಂಸ್ಥೆ ರಂಗಭೂಮಿ (ರಿ.) ಉಡುಪಿ, ಸುಮನಸಾ ಕೊಡವೂರು, ಕಲಾಕಿರಣ್ ಕ್ಲಬ್ ಬೈಲೂರು, ನವಸುಮ ರಂಗಮಂಚ ಕೊಡವೂರು, ಸ್ಪೋರ್ಟ್ಸ್ ಆಂಡ್ ಕಲ್ಬರಲ್ ಕ್ಲಬ್ ಅಂಬಲಪಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ವಿಠೋಬ ಭಜನಾ ಮಂದಿರ ಅಂಬಹ ತುಳುಕೂಟ ಉಡುಪಿ (ರಿ.) ನಂದಗೋಕುಲ ಯುವಕ ಮಂಡಲ ಮಾರ್ಪಳ್ಳಿ, ಬೈದಶ್ರೀ ಸಂಶೋಧನಾ ಕೇಂದ್ರ ಆದಿ ಉಡುಪಿ ಗೌರವಾರ್ಪಣೆ ನೆರವೇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಧುಶ್ರೀ ಪ್ರಕಾಶನದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉಡುಪಿ, ಸಂಚಾಲಕರಾದ ಪ್ರಭಾಕರ್ ಬಿ. ಭಂಡಾರಿ, ಪ್ರಕಾಶ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.