ಸಿಎನ್‌ಜಿ ದರ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ
ಸಿಎನ್‌ಜಿ ದರವನ್ನು ಮಂಗಳವಾರ ಮತ್ತೊಮ್ಮೆ ಹೆಚ್ಚಿಸಲಾಗಿದ್ದು, ಪ್ರತಿ ಕೆಜಿಗೆ 2 ರೂಪಾಯಿ ಏರಿಕೆಯಾಗಿದೆ.
ಈ ಹೊಸ ದರವು ಮೇ 26ರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದೆ. ಇದರೊಂದಿಗೆ ದಿಲ್ಲಿಯಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 83 ರೂಪಾಯಿ 90 ಪೈಸೆಗೆ ತಲುಪಿದೆ. ಮತ್ತೊಂದೆಡೆ, ಮಂಗಳೂರಿನ ಸ್ಥಳೀಯ ಪಂಪ್‌ಗಳಲ್ಲಿ ಒಂದು ಕೆಜಿ ಸಿಎನ್‌ಜಿಗೆ 92 ರೂಪಾಯಿ ವರೆಗೆ ದರ ನಿಗದಿಯಾಗಿದೆ.
ಕಳೆದ 11 ದಿನಗಳಲ್ಲಿ ಇದು ನಾಲ್ಕನೇ ಬಾರಿ ದರ ಏರಿಕೆಯಾಗಿದೆ. ಮೇ 15ರಂದು ಮೊದಲಿಗೆ 2 ರೂಪಾಯಿ ಹೆಚ್ಚಿಸಲಾಗಿತ್ತು. ನಂತರ ಶುಕ್ರವಾರ 1 ರೂಪಾಯಿ, ರವಿವಾರ ಮತ್ತೆ 1 ರೂಪಾಯಿ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 2 ರೂಪಾಯಿ ಹೆಚ್ಚಿಸಿರುವುದರಿಂದ, ಒಟ್ಟು 11 ದಿನಗಳಲ್ಲಿ ಸಿಎನ್‌ಜಿ ದರವು 7 ರೂಪಾಯಿ ಏರಿಕೆಯಾಗಿದೆ.
ಈ ನಿರಂತರ ಬೆಲೆ ಏರಿಕೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ದಿನನಿತ್ಯ ಸಿಎನ್‌ಜಿ ವಾಹನಗಳನ್ನು ಬಳಸುವ ಆಟೋ ಚಾಲಕರು, ಕ್ಯಾಬ್ ಚಾಲಕರು ಮತ್ತು ಮಧ್ಯಮ ವರ್ಗದ ಜನರಿಗೆ ಇದು ಹೆಚ್ಚುವರಿ ಹೊರೆ ಆಗುತ್ತಿದೆ.
ಇಂಧನ ದರ ಏರಿಕೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಸಾರಿಗೆ ವೆಚ್ಚ ಹಾಗೂ ಸಾಮಾನ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.