ಮಾದಕ ವಸ್ತು ಸಾಗಾಟ: ಇಬ್ಬರು ಆರೋಪಿಗಳ ಬಂಧನ
ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 42,30,000 ರೂ. ಮೌಲ್ಯದ 423 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಬೊಳಂತೂರು ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್ (30) ಹಾಗೂ ಮೊಹಮ್ಮದ್ ಶಾಹೀಂ (19) ಬಂಧಿತರು. ಮೇ. 2ರಂದು ಸಂಜೆ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಟಿ (ಕಾ&ಸು) ಅವರಿಗೆ ಎಂ.ಡಿ.ಎಂ.ಎ ಸಾಗಾಟದ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ KA-20-Z-9585 ಸಂಖ್ಯೆಯ ಬೊಲೆರೋ ವಾಹನದಲ್ಲಿ ಮಾದಕ ವಸ್ತು ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾ ಮೂಲದ ವ್ಯಕ್ತಿಯಿಂದ ಎಂ.ಡಿ.ಎಂ.ಎ ಖರೀದಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
423 ಗ್ರಾಂ ಎಂ.ಡಿ.ಎಂ.ಎ, 3 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 46,25,000 ರೂ. ಎಂದು ಅಂದಾಜಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 68/2026, ಕಲಂ 8(C) r/w 20(b)(ii)(C) ಅಡಿಯಲ್ಲಿ NDPS ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.