ಕಡು ಬೇಸಿಗೆಯಲ್ಲೂ ಬತ್ತದ ಪುಷ್ಕರಣಿ.. ಉಡುಪಿಯಲ್ಲಿ ಅಪರೂಪದ ಜಲವಿಸ್ಮಯ..!
Monday, May 11, 2026
ಉಡುಪಿ ಜಿಲ್ಲೆಯಲ್ಲೊಂದು ಅಪರೂಪದ ಜಲವಿಸ್ಮಯ ಜನರನ್ನು ಅಚ್ಚರಿಗೆ ಗುರಿಮಾಡುತ್ತಿದೆ. ಕಡು ಬೇಸಿಗೆಯಿಂದಾಗಿ ಎಲ್ಲೆಡೆ ಕೆರೆ-ಕೊಳಗಳು ಬತ್ತಿ ಹೋಗುತ್ತಿರುವ ಸಮಯದಲ್ಲೂ, ಕೀಳಿಂಜೆ ಗ್ರಾಮದ ಪುರಾತನ ಹರಿಹರ ಸನ್ನಿಧಾನದ ಪುಷ್ಕರಣಿಯಲ್ಲಿ ಮಾತ್ರ ಸ್ಪಟಿಕದಷ್ಟು ಶುದ್ಧವಾದ ನೀರು ಸದಾ ತುಂಬಿಕೊಂಡಿದೆ.
ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ದೇಗುಲದ ವಿಶೇಷವೇ ಅದರ ಪುಷ್ಕರಣಿ. ವರ್ಷದ 365 ದಿನವೂ ಈ ಕೆರೆಗೆ ಅಂತರ್ಜಲ ಹರಿದು ಬರುತ್ತಿದ್ದು, ತೆರೆದಿಟ್ಟ ನಳ್ಳಿಯಿಂದ ನೀರು ಸುರಿಯುವಂತೆ ನಿರಂತರವಾಗಿ ಜಲಧಾರೆ ಕಾಣಿಸಿಕೊಳ್ಳುತ್ತದೆ. ಹಗಲು-ರಾತ್ರಿ ಎನ್ನದೇ ನೀರಿನ ಒರತೆ ಹರಿದು ಬರುತ್ತಿರುವ ದೃಶ್ಯ ಭಕ್ತರು ಹಾಗೂ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಕಾಡಿನ ಮಧ್ಯೆ, ಎತ್ತರ ಪ್ರದೇಶದಲ್ಲಿರುವ ಈ ಪುರಾತನ ಕ್ಷೇತ್ರದ ಸುತ್ತ ನೂರಾರು ಮರಗಳಿವೆ. ಮರಗಳು ಹಿಡಿದಿಟ್ಟಿರುವ ನೀರು ಭೂಗರ್ಭದ ಮೂಲಕ ಪುಷ್ಕರಣಿಗೆ ಹರಿದು ಬರುತ್ತಿದೆ ಎನ್ನಲಾಗುತ್ತಿದೆ. ಪ್ರಕೃತಿಯ ಸಹಜ ಜಲಚಕ್ರದ ಅದ್ಭುತ ಉದಾಹರಣೆಯಾಗಿ ಈ ಸ್ಥಳ ಗಮನ ಸೆಳೆಯುತ್ತಿದೆ.
ಈ ಬಾರಿ ಉಡುಪಿಯಲ್ಲಿ ಕಂಡುಬರದಷ್ಟು ಉಷ್ಣಾಂಶ ದಾಖಲಾಗಿದ್ದರೂ, ಈ ಪುಷ್ಕರಣಿಯ ನೀರಿನ ಮಟ್ಟದಲ್ಲಿ ಯಾವುದೇ ಕುಸಿತವಾಗಿಲ್ಲ. ಬೇಸಿಗೆಯ ತಾಪದಿಂದ ಕಂಗೆಟ್ಟ ಜನರಿಗೆ ಈ ಸ್ಥಳ ತಂಪಿನ ಅನುಭವ ನೀಡುತ್ತಿದೆ. ಅಲ್ಲದೆ, ನೀರಿನ ಶುದ್ಧತೆ ಮತ್ತು ನಿರಂತರ ಹರಿವು ಈ ಕ್ಷೇತ್ರದ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಕೃತಿ, ಭಕ್ತಿ ಮತ್ತು ಜಲವಿಸ್ಮಯ ಒಂದೇ ಕಡೆ ಸೇರಿರುವ ಕೀಳಿಂಜೆ ಹರಿಹರ ಸನ್ನಿಧಾನ ಇದೀಗ ಜನರ ಕುತೂಹಲದ ಕೇಂದ್ರಬಿಂದುವಾಗಿದೆ.

.jpeg)

.jpeg)