-->
ಮಹಿಳೆಯ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಹಿಳೆಯ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ


ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

2014ರ ಫೆಬ್ರವರಿ 8ರಂದು ಸಂಜೆ 4ರಿಂದ ರಾತ್ರಿ 8ರ ನಡುವೆ ಕುಳಾಯಿ ಹೊಸಬೆಟ್ಟು ಕೋರ್ದಬ್ಬು ‘ಕಲ’ದ ಬಳಿ ವಾಸವಾಗಿದ್ದ ಸುಮತಿ ಪ್ರಭು ಅವರನ್ನು ಕುತ್ತಿಗೆಗೆ ಚೂರಿಯಿಂದ  ಇರಿದು ಕೊಲೆ ಮಾಡಿ, ಸುಮಾರು 3.80 ಲಕ್ಷ ರೂ. ಮೌಲ್ಯದ 192 ಗ್ರಾಂ (24 ಪವನ್) ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 44/2014 ಅಡಿಯಲ್ಲಿ ಐಪಿಸಿ ಕಲಂ 120ಬಿ, 449, 392, 302 ಹಾಗೂ 34ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವರಾಮ್, ಬಹದ್ದೂರ್ ಸಿಂಗ್ ಹಾಗೂ ಶಹನ್ವಾಜ್  ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿದ್ದು, ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.

ಈ ನಡುವೆ, ಆರೋಪಿಗಳಲ್ಲೊಬ್ಬನಾದ ಬಹದ್ದೂರ್ ಸಿಂಗ್ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ನ್ಯಾಯಾಲಯವು ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಿ ನಂತರ ಉದ್ಘೋಷಣೆಯನ್ನೂ ಜಾರಿಗೊಳಿಸಿತ್ತು.

ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಮಾಹಿತಿ ಆಧಾರದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿ ಗ್ರಾಮದಲ್ಲಿ ಅಡಗಿದ್ದ ಬಹದ್ದೂರ್ ಸಿಂಗ್ ಅನ್ನು ಮೇ 3ರಂದು ಮಧ್ಯಾಹ್ನ 1 ಗಂಟೆಗೆ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸುರತ್ಕಲ್ ಠಾಣೆಯ ಹೆಚ್.ಸಿ ಅಜಿತ್ ಮ್ಯಾಥ್ಯು, ಸಿಪಿಸಿ ಸುನೀಲ್ ಕುಸನಾಳ, ಸಿಪಿಸಿ ಮೋಹನ್ ಅವರು ಪ್ರಮುಖ ಪಾತ್ರ ವಹಿಸಿದ್ದು, ಹೆಚ್.ಸಿ ರಾಜೇಂದ್ರ ಪ್ರಸಾದ್ ಹಾಗೂ ಪಿಸಿ ಸತೀಶ್ ಸಹಕರಿಸಿದ್ದಾರೆ.


Ads on article

Advertise in articles 1

advertising articles 2

Advertise under the article