ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರ ಅನುಕೂಲಕ್ಕೆ ಹೊಸ ವ್ಯವಸ್ಥೆ
ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉರಿಬಿಸಿಲಿನ ನಡುವೆ ಸರತಿಯ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಭಕ್ತರಿಗೆ ದೊಡ್ಡ ಸವಾಲಾಗಿತ್ತು. ಇದೀಗ ಪರ್ಯಾಯ ಶಿರೂರು ಮಠ ಭಕ್ತರ ಅನುಕೂಲಕ್ಕಾಗಿ ಶಾಶ್ವತ ಮೇಲ್ಚಾವಣಿ ಅಳವಡಿಸುವ ಮೂಲಕ ಹೊಸ ವ್ಯವಸ್ಥೆ ಕಲ್ಪಿಸಿದೆ.
ಈ ಬಾರಿ ಉಡುಪಿ ನಗರದಲ್ಲಿ ಬಿಸಿಲಿನ ತಾಪಮಾನ ಗಣನೀಯವಾಗಿ ಏರಿಕೆಯಾಗಿದ್ದು, ಅದರ ನಡುವೆಯೇ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಬೇಸಿಗೆ ರಜೆ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ.
ಆದರೆ ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕಾಗಿರುವುದು ಭಕ್ತರಿಗೆ ತೊಂದರೆಯಾಗಿತ್ತು. ವಿಶೇಷವಾಗಿ ರಥಬೀದಿ ಭಾಗದಲ್ಲಿ ಉರಿಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಮಕ್ಕಳು ಹಾಗೂ ವೃದ್ಧರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದರು. ಕಾಂಕ್ರೀಟ್ ನೆಲದ ಮೇಲೆ ಬಿಸಿಲಿನಲ್ಲಿ ನಿಂತು ಕಾಯುವುದು ಭಕ್ತರಿಗೆ ಹರಸಾಹಸವಾಗಿತ್ತು.
ಈ ಸಮಸ್ಯೆಯನ್ನು ಮನಗಂಡ ಪರ್ಯಾಯ ಶಿರೂರು ಮಠ ಸರತಿಯ ಸಾಲಿನ ಭಾಗದಲ್ಲಿ ಶಾಶ್ವತ ಮೇಲ್ಚಾವಣಿ ಅಳವಡಿಕೆ ಮಾಡಿದೆ. ಇದರಿಂದ ದರ್ಶನಕ್ಕೆ ಬರುವ ಭಕ್ತರಿಗೆ ನೆರಳಿನಲ್ಲಿ ನಿಲ್ಲುವ ಅವಕಾಶ ದೊರೆತಿದೆ.
ಗೀತಾ ಮಂದಿರದ ಮೂಲಕ ಸಾಗುವ ಭಕ್ತರಿಗೆ ಈಗ ಹೆಚ್ಚಿನ ನೆರಳು ಸಿಗುತ್ತಿದ್ದು, ಬಿಸಿಲಿನ ತಾಪದಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ಸಿಕ್ಕಂತಾಗಿದೆ. ಸರತಿ ವ್ಯವಸ್ಥೆಯನ್ನೂ ಇನ್ನಷ್ಟು ಸುವ್ಯವಸ್ಥಿತಗೊಳಿಸಲಾಗಿದೆ.
ಇದೇ ವೇಳೆ ಸರತಿಯಲ್ಲಿ ನಿಂತಿರುವ ಭಕ್ತರಿಗೆ ಪ್ರತಿದಿನ ತಂಪು ಪಾನೀಯ ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಸ್ಥಳೀಯ ಭಕ್ತರಿಗಾಗಿ ಪ್ರತ್ಯೇಕ ಸರತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಕನಕನ ಕಿಂಡಿಯ ಮೂಲಕ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಭಕ್ತರ ಹಿತದೃಷ್ಟಿಯಿಂದ ಕೈಗೊಂಡಿರುವ ಈ ಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಉರಿಬಿಸಿಲಿನ ನಡುವೆಯೂ ಭಕ್ತರಿಗೆ ಸ್ವಲ್ಪ ನೆಮ್ಮದಿ ನೀಡುವ ಪ್ರಯತ್ನವಾಗಿ ಮೇಲ್ಚಾವಣಿ ವ್ಯವಸ್ಥೆ ಸಹಕಾರಿಯಾಗಿದ್ದು, ಪ್ರತಿದಿನ ಆಗಮಿಸುವ ಸಾವಿರಾರು ಭಕ್ತರಿಗೆ ಇದರಿಂದ ಅನುಕೂಲವಾಗುತ್ತಿದೆ.
