ಉಡುಪಿ ಧರ್ಮಪ್ರಾಂತ್ಯಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಯೋಜನೆಯಿದೆ: ಬಿಷಪ್
Tuesday, May 12, 2026
ಉಡುಪಿ ಧರ್ಮಪ್ರಾಂತ್ಯವು ತನ್ನದೇ ಆದ ಒಂದು ಸುಸಜ್ಜಿತ ಆಸ್ಪತ್ರೆ ಆರಂಭಿಸುವ ಬಗ್ಗೆ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಸೂಚನೆ ನೀಡಿದ್ದಾರೆ.
ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗವು ಅನುಗ್ರಹ ಪ್ಯಾಸ್ಟೋರಲ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯಲ್ಲಿ ಮಾತನಾಡಿದ ಅವರು “ವಿಶೇಷವಾಗಿ ಉಡುಪಿ ಧರ್ಮ ಪ್ರಾಂಥ್ಯಕ್ಕೆ ತನ್ನದೇ ಆದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದ್ದು, ಧರ್ಮಪ್ರಾಂತ್ಯದ ಆಸ್ಪತ್ರೆ ನಿರ್ಮಿಸುವುದು ಮಾಜಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರ ಕನಸಾಗಿತ್ತು. ಅವರ ಅವಧಿಯಲ್ಲಿ ಅದು ಈಡೇರದಿದ್ದರೂ, ಈಗ ಅದನ್ನು ನನಸಾಗಿಸುವ ಜವಾಬ್ದಾರಿ ನನ್ನ ಮೇಲಿದೆ”, ಎಂದರು.
ಧರ್ಮಪ್ರಾಂತ್ಯದಲ್ಲಿ ಸುಮಾರು 165 ವೈದ್ಯರು ಹಾಗೂ 702 ದಾದಿಯರು ಇದ್ದಾರೆ ಎಂಬುದನ್ನು ಉಲ್ಲೇಖಿಸಿದ ಅವರು, “ಇದು ನಮ್ಮ ಧರ್ಮಪ್ರಾಂತ್ಯದ ದೊಡ್ಡ ಶಕ್ತಿಯಾಗಿದೆ. ನಮ್ಮ ವೈದ್ಯರು ಮತ್ತು ದಾದಿಯರು ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮೊದಲು ನಾವು ಹುಟ್ಟಿ ಬೆಳೆದ ನೆಲದಲ್ಲಿ ಸೇವೆ ಸಲ್ಲಿಸಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಈ ಕನಸನ್ನು ನನಸಾಗಿಸಬಹುದು”, ಎಂದು ಹೇಳಿದರು. ಆರೋಗ್ಯ ಆಯೋಗದ ಹೊಸ ನಿರ್ದೇಶಕಿ ಹಿಲ್ಡಾ ಕಾರ್ನೆಲಿಯೊ ಅವರ ನೇತೃತ್ವದಲ್ಲಿ ಆಸ್ಪತ್ರೆ ಯೋಜನೆಯನ್ನು ಮುಂದುವರಿಸಲಾಗುವುದು. ಇದಲ್ಲದೆ, ಭವಿಷ್ಯದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸುವ ಕನಸನ್ನೂ ವ್ಯಕ್ತಪಡಿಸಿದ ಅವರು, ಆಸ್ಪತ್ರೆ ಆರಂಭವಾದರೆ ಅನೇಕರು ಉಚಿತ ಸೇವೆ ನೀಡಲು ಮುಂದೆ ಬರುತ್ತಾರೆ ಎಂದೂ ಸೇರಿಸಿದರು.
ಕ್ರೈಸ್ತ ಸಮುದಾಯದ ವೈದ್ಯರು ಮತ್ತು ದಾದಿಯರ ಅಮೂಲ್ಯ ಜೀವವನ್ನು ಕಾಪಾಡುವ ಸೇವೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
