ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುವವರ ಮೇಲೆ "ಕನ್ನಡಿ ಪ್ರಯೋಗ": ಮೈಸೂರು ಪಾಲಿಕೆಯ ಹೊಸ ಪ್ರಯತ್ನ
ಸಾಂಸ್ಕೃತಿಕ ಸೊಬಗಿನ ಮೈಸೂರಿನ ಕೆಲವು ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಅಶುದ್ಧಗೊಳಿಸುವ ಸಮಸ್ಯೆ ಹೆಚ್ಚಾಗಿತ್ತು. ಇದನ್ನು ತಡೆಗಟ್ಟಲು ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ ಹೊಸ ಪ್ರಯೋಗ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಸಾಂಸ್ಕೃತಿಕ ನಗರಿ ಎಂದು ಕರೆಯಲ್ಪಡುವ ಮೈಸೂರು ಕಲೆ ಸಂಸ್ಕೃತಿಯ ಬೀಡು. ಅಲ್ಲದೇ ಸ್ವಚ್ಛ ಸುಂದರ ನಗರಿ ಎನ್ನುವ ಬಿರುದು ಕೂಡಾ ಮೈಸೂರಿಗಿದೆ, ಆದರೆ ರಸ್ತೆ ಇಕ್ಕೆಲಗಳಲ್ಲಿ ಪರಿಸರದ ಅಂದಗೆಡವಲಾಗುತ್ತಿದೆ. ಮೈಸೂರು ಮಹಾ ನಗರ ಪಾಲಿಕೆ ನಗರದ ಅಂದಗೆಡವುವವರ ವಿರುದ್ಧ ಅದೆಷ್ಟು ಕ್ರಮ ಕೈಗೊಂಡರೂ ಪ್ರಯೋಜನವಾಗಿಲ್ಲ. ರಸ್ತೆಯುದ್ದಕ್ಕೂ ಮೂತ್ರ ವಿಸರ್ಜನೆ ಮಾಡುವವರ ಕ್ರಮಕೈಗೊಳ್ಳಲು ಪಾಲಿಕೆ ಹೊಸತೊಂದು ಪ್ರಯತ್ನಕ್ಕೆ ಕೈಹಾಕಿದೆ.
ರಸ್ತೆ ಬದಿಗಳು, ಕಾಂಪೌಂಡ್ ಗೋಡೆಗಳು—ಯಾವುದೇ ಖಾಲಿ ಸ್ಥಳ ಕಂಡರೂ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕ್ರಮ ಕೈಗೊಂಡರೂ ಪರಿಣಾಮಕಾರಿ ಫಲಿತಾಂಶ ಸಿಗದೆ, ಪಾಲಿಕೆ ವಿಭಿನ್ನ ಯೋಚನೆಗೆ ಮುಂದಾಯಿತು. ಅದೇ “ಕನ್ನಡಿ ಪ್ರಯೋಗ”.
ಮೈಸೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲು ಕನ್ನಡಿಗಳ ಅಳವಡಿಕೆ ಮಾಡಿದೆ. ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿಯಂತಹ ಕಡೆ, ಗೋಡೆಗಳ ಮೇಲೆ ಪ್ರತಿಫಲಿತ ಬೃಹತ್ ಸ್ಟೀಲ್ ಕನ್ನಡಿಗಳನ್ನು ಅಳವಡಿಸಲಾಗಿದೆ. ಇದರಿಂದ ಮೂತ್ರ ವಿಸರ್ಜನೆ ಮಾಡಲು ಬರುವವರು ತಮ್ಮ ಪ್ರತಿಬಿಂಬವನ್ನು ನೋಡಿ ಹಿಂಜರಿಯುವಂತೆ ಮಾಡುವುದು ಇದರ ಮುಖ್ಯ ಉದ್ದೇಶ.
ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಕಾಂಪೌಂಡ್ ಗೋಡೆಗಳಿಗೆ ಕನ್ನಡಿಗಳನ್ನು ಆಂಟಿಸಿದೆ. ಯಾರಾದರೂ ಅಲ್ಲಿ ಮೂತ್ರ ವಿಸರ್ಜನೆಗೆ ನಿಂತರೆ, ಕನ್ನಡಿಯ ಕಾರಣದಿಂದ ಅವರು ತಮ್ಮನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ. ಜೊತೆಗೆ ರಸ್ತೆಯಲ್ಲಿ ಸಂಚರಿಸುವವರಿಗೂ ಅವರು ಸ್ಪಷ್ಟವಾಗಿ ಕಾಣಿಸುತ್ತಾರೆ. ಇದು ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟುಮಾಡುತ್ತದೆ ಮತ್ತು ಈ ಕೆಟ್ಟ ಅಭ್ಯಾಸದಿಂದ ಜನ ದೂರ ಸರಿಯಬಹುದು ಎಂಬ ಉದ್ದೇಶದಿಂದ ಪಾಲಿಕೆ ಈ ಪ್ರಯತ್ನಕ್ಕೆ ಕೈಹಾಕಿದೆ.
ಪ್ರಾಯೋಗಿಕವಾಗಿ ಈ ಯೋಜನೆಯನ್ನು ನಗರದ ಎರಡು ಪ್ರಮುಖ ಕಡೆಗಳಲ್ಲಿ ಜಾರಿಗೆ ತರಲಾಗಿದೆ. ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮೋರಿ ಬಳಿ ಹಾಗೂ ಸರ್ಕಾರಿ ಅತಿಥಿಗೃಹದ ಕಾಂಪೌಂಡ್ ಗೋಡೆಗೆ ಕನ್ನಡಿಗಳನ್ನು ಹಾಕಲಾಗಿದೆ.
ಕೇವಲ ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿ ವೇಳೆಯಲ್ಲೂ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎನ್ನುವ ಕಾರಣಕ್ಕಾಗಿ ಕನ್ನಡಿಯ ಕೆಳಗಡೆ ಎಲ್ಇಡಿ ಲೈಟ್ ಗಳನ್ನು ಕೂಡಾ ಹಾಕಲಾಗಿದೆ. ಮೈಸೂರು ಮಹಾನಗರ ಪಾಲಿಕೆಯ ವಿಶಿಷ್ಟ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಮೈಸೂರಿನ ಕನ್ನಡಿ ಪ್ರಯೋಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲಾ ಕಡೆ ಇಂತಹ ವಿನೂತನ ಪ್ರಯೋಗ ಜಾರಿಯಾದರೆ ನಗರ ಸ್ವಚ್ಛವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.