ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥ ಯುವಕ ತಮಿಳುನಾಡಿನಲ್ಲಿ ಕೊಲೆ ಆರೋಪಿ
ಮಂಗಳೂರು ನಗರದಲ್ಲಿ ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥನೋರ್ವ ತಮಿಳುನಾಡಿನಲ್ಲಿ ಕೊಲೆ ಪ್ರಕರಣವೊಂದರ ಆರೋಪಿಯೆಂದು ತಿಳಿದು ಬಂದಿದೆ.
2025ರ ನ.25ರಂದು ಇಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಯ ಬಳಿಕ ಆಪ್ತ ಸಮಾಲೋಚನೆ ವೇಳೆ ಆತ ತನ್ನ ಹೆಸರು ಅನೀಶ್ ಕುಮಾರ್ ಎಂದು ತಿಳಿಸಿದ್ದ. ಆತನ ತಾಯಿ ರಾಧಾ ಅವರು ತಮಿಳುನಾಡಿನ ಆಸ್ಪತ್ರೆಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಆಗ ಲಭ್ಯವಾಗಿತ್ತು. ಈ ಮಾಹಿತಿಯನ್ನು ಆಧರಿಸಿ, ಪೊಲೀಸರು ತನಿಖೆ ನಡೆಸಿದಾಗ ಆತನ ತಾಯಿ ತನಗೆ ಮಗಳೊಬ್ಬಳೇ ಇರುವುದಾಗಿ ಮತ್ತು ಅನೀಶ್ ಯಾರೆಂದು ತಿಳಿದಿಲ್ಲವೆಂದು ಹೇಳಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ತಮಿಳುನಾಡಿನ ಎರ್ನೇಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಆತನ ಮೇಲೆ ಕೊಲೆ ಪ್ರಕರಣವೊಂದು ದಾಖಲಾಗಿರುವ ವಿಷಯ ಬೆಳಕಿಗೆ ಬಂದಿದೆ.
ತಮಿಳುನಾಡು ಪೊಲೀಸರ ಮಾಹಿತಿಯ ಪ್ರಕಾರ, ಅನೀಶ್ ಕುಮಾರ್ ತನ್ನ ಸ್ನೇಹಿತನ ಮೇಲೆ ಕೋಪಗೊಂಡು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ. ಈ ಪ್ರಕರಣದ ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಅಲ್ಲಿಂದ ಬಂದವ ಮಂಗಳೂರಿನ ದಕ್ಕೆಯಲ್ಲೂ ಕೆಲಸ ಮಾಡಿದ್ದ ಎಂದೂ ಹೇಳಲಾಗಿದೆ.
ಪ್ರಸ್ತುತ ತಮಿಳುನಾಡು ಪೊಲೀಸರು ಮಂಗಳೂರಿಗೆ ಆಗಮಿಸಿದ್ದು, ಅಗತ್ಯ ದಾಖಲೆಗಳೊಂದಿಗೆ ಆರೋಪಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಈತ ಮಂಗಳೂರಿನ ಪೊಲೀಸ್ ನಿಗಾದಲ್ಲಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.