-->
 ಬೇಸಿಗೆ ರಜೆಯಲ್ಲಿ ಬಾಲಕನಿಂದ ಪುಟ್ಟ ನರ್ಸರಿ: ಗ್ರಾಹಕರ ಮನಸ್ಸು ಗೆದ್ದ ಅಯಾನ್ಶ್

ಬೇಸಿಗೆ ರಜೆಯಲ್ಲಿ ಬಾಲಕನಿಂದ ಪುಟ್ಟ ನರ್ಸರಿ: ಗ್ರಾಹಕರ ಮನಸ್ಸು ಗೆದ್ದ ಅಯಾನ್ಶ್


ಬೇಸಿಗೆ ರಜೆಯಲ್ಲಿ ಮೊಬೈಲ್, ಟಿವಿಯಲ್ಲೇ ಸಮಯ ಕಳೆಯದೇ ಹತ್ತು ವರ್ಷದ ಬಾಲಕ ಸಣ್ಣ ನರ್ಸರಿ ಆರಂಭಿಸಿ ಗಿಡಗಳನ್ನು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. 


ಉಡುಪಿಯ ಪಂದುಬೆಟ್ಟು ನಿವಾಸಿ ಡಾ. ಸುಷ್ಮಿತಾ- ಅಶ್ವಥ್ ರಾಜ್ ಮಲ್ಪೆ ಇವರ ಮಗ ಅಯಾನ್ಶ್ ಪೂಜಾರಿ ಬ್ರಹ್ಮಾವರದ ಲಿಟ್ಲ್ ರಾಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ. ಬೇಸಿಗೆ ರಜೆಯಲ್ಲಿ ಮೊಬೈಲ್ ಟಿವಿ ಎಂದು ಕಾಲಹರಣ ಮಾಡದೇ ಈತ ತನ್ನಿಷ್ಟದ ಕಾಯಕದಲ್ಲಿ ತೊಡಗಿಕೊಂಡಿದ್ದಾನೆ. 


ಮಣಿಪಾಲದ ಮಕ್ಕಳ ಅಂಗಡಿಯಲ್ಲಿ ತನ್ನದೇ ಪುಟ್ಟ ನರ್ಸರಿ ಸ್ಟಾಲ್ ತೆರೆದ ಅಯಾನ್ಶ್ ಪೂಜಾರಿ, ಸುಮಾರು 40ಕ್ಕೂ ಹೆಚ್ಚು ಗಿಡಗಳನ್ನು ಮಾರಾಟ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ. 


ಅವನ ಉತ್ಸಾಹ ನೋಡಿದವರು ಕೇವಲ ಗಿಡಗಳನ್ನೇ ಖರೀದಿಸಲಿಲ್ಲ, ಆತನ ಹಸಿರು ಕನಸಿಗೆ ಬೆಂಬಲ ನೀಡಿದ್ದಾರೆ. ಅಂಗಡಿಗೆ ಬಂದವರು ಯಾರೂ ಖಾಲಿ ಕೈಯಲ್ಲಿ ವಾಪಾಸ್ ಹೋಗಿಲ್ಲ. ಪ್ರಕೃತಿ ಮೇಲಿರುವ ಆತನ ಪ್ರೀತಿ, ಗಿಡಗಳ ಬಗ್ಗೆ ಆತನಿಗಿರುವ ಕಾಳಜಿ ಹಾಗೂ ಒಂದೊಂದು ಗಿಡಗಳ ಬಗ್ಗೆಯೂ ಆತನಿಗಿರುವ ಮಾಹಿತಿಯನ್ನು ಕೇಳಿದ ಗ್ರಾಹಕರು ಫಿದಾ ಆಗಿದ್ದಾರೆ.

ಬಾಲ್ಯದಿಂದಲೂ ಅಯಾನ್ಶ್ ಪೂಜಾರಿಗೆ ಪರಿಸರದ ಮೇಲೆ ಇನ್ನಿಲ್ಲದ ಕಾಳಜಿ. ಬಾಲ್ಯದ ಕುತೂಹಲವೇ ಅವನನ್ನು ಪ್ರಕೃತಿಯತ್ತ ಕರೆದೊಯ್ದಿತು. ಅಯಾನ್ಶ್ ನ ಅಜ್ಜಿ ವಿಜಯ ಗೋಪಾಲ್ ಬಂಗೇರ ಅವರಿಗೂ ಗಿಡಗಳೆಂದರೆ ಪ್ರೀತಿ. ಅಜ್ಜಿ ಮೊಮ್ಮಗನ ಪ್ರಯತ್ನದಿಂದ ಮನೆ ಪರಿಸರದಲ್ಲಿ ಇನ್ನೂರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ಮನೆಯ ಪರಿಸರದ ತುಂಬೆಲ್ಲಾ ಅಜ್ಜಿಯ ಹಸಿರು ಗಾರ್ಡನ್ ನೋಡಿಕೊಳ್ಳುತ್ತಾ ಬೆಳೆದ ಅಯಾನ್ಶ್ ಗೆ ಗಿಡಗಳ ಮೇಲೆ ಪ್ರೀತಿ ಹುಟ್ಟಿದೆ. ಹೀಗೆ  "ಹಸಿರು ಬೆಳೆಸಿ ಆರೋಗ್ಯಯುತವಾಗಿರಿ" ಎನ್ನುವ ಸಂದೇಶ ಸಾರಲು ಮುಂದಾದ ಅಯಾನ್ಶ್ ಗೆ ಬೆಂಬಲ ನೀಡಿದ್ದು ಮಣಿಪಾಲದ ಪರ್ಪಲ್ ಸ್ಪೇಸ್ ಲೈಬ್ರರಿ. ಮಣಿಪಾಲದ ರೋಟರಿ ಹಾಲ್ ನಲ್ಲಿ ಆಯೋಜಿಸಲಾದ ಮಕ್ಕಳ ಅಂಗಡಿಯಲ್ಲಿ ಅಯಾನ್ಶ್ ನ ವಿವಿಧ ವಿನ್ಯಾಸದ ಆಕರ್ಷಕ ಪಾಟ್ ನಲ್ಲಿ ನೆಟ್ಟ ಗಿಡಗಳು ಗ್ರಾಹಕರನ್ನು ಆಕರ್ಷಿಸಿದೆ. ಅಜ್ಜಿ ವಿಜಯಾ ಗೋಪಾಲ ಬಂಗೇರ ಅವರು ಮೊಮ್ಮಗನ ಪುಟ್ಟ ನರ್ಸರಿಗೆ ಬೆಂಬಲ ಸೂಚಿಸಿದ್ದು, ತಾನು ಮನೆಯಲ್ಲೇ ನೆಟ್ಟ ಹಲವು ಇಂಡೋರ್ ಫ್ಲ್ಯಾಂಟ್ಸ್, ಹಣ್ಣುಗಳ ಗಿಡಗಳನ್ನು ಅಯಾನ್ಶ್ ನ ಪುಟ್ಟ ನರ್ಸರಿಗೆ ನೀಡಿದ್ದಾರೆ. ಝೀಝೀ ಪ್ಲ್ಯಾಂಟ್, ಮನಿ ಪ್ಲ್ಯಾಂಟ್, ಸ್ನೇಕ್ ಪ್ಲ್ಯಾಂಟ್, Aglaonema plant ಹೀಗೆ ಸುಮಾರು ನೂರಕ್ಕೂ ಅಧಿಕ ಗಿಡಗಳನ್ನು ಮಾರಾಟ ಮಾಡಿ, ಸುಮಾರು ಅಧಿಕ ಹಣ ಗಳಿಸಿದ್ದಾನೆ. 

ಅಯಾನ್ಶ್‌ನ ಪರಿಸರ ಪ್ರೀತಿ, ಪರಿಶ್ರಮ ಅನೇಕ ಮಕ್ಕಳಿಗೆ ಸ್ಪೂರ್ತಿಯಾಗಿದೆ. ರಜೆ ಅಂದರೆ ಸಮಯ ವ್ಯರ್ಥ ಮಾಡುವುದಲ್ಲ ಬದಲಿಗೆ ಹೊಸ ಕನಸುಗಳನ್ನು ಬೆಳೆಸುವ ಸಮಯ ಎಂಬುದನ್ನು ಈ ಪುಟ್ಟ ಬಾಲಕ ತೋರಿಸಿದ್ದಾನೆ.

Ads on article

Advertise in articles 1

advertising articles 2

Advertise under the article