ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಹವಾಮಾನ ಬದಲಾವಣೆ ಕುರಿತು ಕಾರ್ಯಾಗಾರ
ವಿಶ್ವ ಪರಿಸರ ದಿನದ ಅಂಗವಾಗಿ ಉಡುಪಿ ಕುಂಜಿಬೆಟ್ಟುವಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ I ಹಾಗೂ II ವತಿಯಿಂದ “ಹವಾಮಾನ ಬದಲಾವಣೆ ಮತ್ತು ಕರಾವಳಿ ಪ್ರದೇಶಗಳ ಮೇಲಿನ ಪರಿಣಾಮ” ವಿಷಯದ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ಸಂವಾದದ ಕಾರ್ಯನಿರ್ವಾಹಕ ನಿರ್ದೇಶಕರಾದ ನಿಹಾಲ್ ಕಿದಿಯೂರು ಭಾಗವಹಿಸಿ, ಹವಾಮಾನ ಬದಲಾವಣೆಯಿಂದ ಕರಾವಳಿ ಪ್ರದೇಶಗಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳು, ಪರಿಸರ ಸವಾಲುಗಳು ಹಾಗೂ ಅವುಗಳನ್ನು ಎದುರಿಸುವಲ್ಲಿ ಯುವಜನರ ಪಾತ್ರದ ಕುರಿತು ಮಾಹಿತಿ ನೀಡಿದರು. ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ಕಾನೂನು ವಿಭಾಗದ ಮುಖ್ಯಸ್ಥರಾದ ಡಾ. ಜಯಮೋಲ್ ಪಿ. ಎಸ್. ಅವರು ಮಾತನಾಡಿ, ಪರಿಸರ ಸಂರಕ್ಷಣೆ ಇಂದಿನ ಕಾಲಘಟ್ಟದ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದ್ದು, ಪರಿಸರ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಪ್ರೀತಿ ಹರೀಶ್ ರಾಜ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸುಸ್ಥಿರ ಭವಿಷ್ಯದ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ನವೀನ್ ಚಂದ್ರ ಸಿ. ಬಿ. ಹಾಗೂ ಅಮೋಘ ಗಡ್ಕರ್, ಎನ್ಎಸ್ಎಸ್ ಕಾರ್ಯದರ್ಶಿಗಳಾದ ಸಮೀರ್ ತೀರ್ಥಹಳ್ಳಿ, ರಕ್ಷಿತಾ ಮತ್ತು ಅಂಕಿತ ಉಪಸ್ಥಿತರಿದ್ದರು. ಎನ್ಎಸ್ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.