-->
ಹಿರಿಯ ಪತ್ರಕರ್ತ, ಪಂಚಾಯತ್ ರಾಜ್ ತಜ್ಞ ಜನಾರ್ದನ ಮರವಂತೆ ನಿಧನ

ಹಿರಿಯ ಪತ್ರಕರ್ತ, ಪಂಚಾಯತ್ ರಾಜ್ ತಜ್ಞ ಜನಾರ್ದನ ಮರವಂತೆ ನಿಧನ


ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಹಾಗೂ ರಾಷ್ಟ್ರೀಯ ಮಟ್ಟದ ಪಂಚಾಯತ್ ರಾಜ್ ತಜ್ಞ ಜನಾರ್ದನ ಮರವಂತೆ ಅವರು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. 88 ವರ್ಷ ವಯಸ್ಸಿನ ಅವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂಗ್ಲಿಷ್ ಭಾಷಾ ಉಪನ್ಯಾಸಕರಾಗಿದ್ದ ಜನಾರ್ದನ ಮರವಂತೆ ಅವರು ಬೈಂದೂರು, ನಾವುಂದ ಹಾಗೂ ಹೆಮ್ಮಾಡಿ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಕ್ಷೇತ್ರದ ಜೊತೆಗೆ ಹವ್ಯಾಸಿ ಅಂಕಣಕಾರ ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಅವರು, ಹಲವು ವರ್ಷಗಳ ಕಾಲ ಪ್ರಜಾವಾಣಿ ಮತ್ತು ಉದಯವಾಣಿ ಪತ್ರಿಕೆಗಳಿಗೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ, ಶಿಕ್ಷಣ ಹಾಗೂ ಪಂಚಾಯತ್ ರಾಜ್ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರು ವಿವಿಧ ವೇದಿಕೆಗಳಲ್ಲಿ ಉಪನ್ಯಾಸ ಮತ್ತು ವಿಚಾರ ಮಂಡನೆಗಳ ಮೂಲಕ ಜನಜಾಗೃತಿ ಮೂಡಿಸಿದ್ದರು. ತಾಲೂಕು ಕಾನೂನು ನೆರವು ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಮರವಂತೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅವರು, ತಮ್ಮ ಅವಧಿಯಲ್ಲಿ ಗ್ರಾಮ ಪಂಚಾಯತ್‌ಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಗೌರವಗಳನ್ನು ತಂದುಕೊಟ್ಟಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಹೊಂದಿದ್ದ ವಿಶಿಷ್ಟ ಪರಿಣತಿಯ ಕಾರಣದಿಂದ ಮೈಸೂರು ಪಂಚಾಯತ್ ರಾಜ್ ತರಬೇತಿ ಕೇಂದ್ರದ ತರಬೇತುದಾರರಾಗಿ ನೇಮಕಗೊಂಡಿದ್ದರು.

ಮರವಂತೆ ಸಾಹಿತ್ಯ ಸಮ್ಮೇಳನ, ತ್ರಾಸಿ-ಮರವಂತೆ ಕಡಲತೀರ ಉಳಿಸಿ ಆಂದೋಲನ ಹಾಗೂ ತ್ರಿಸ್ಥರ ಪಂಚಾಯತ್ ವ್ಯವಸ್ಥೆಯ ಹಕ್ಕುಗಳ ಹೋರಾಟಗಳಿಗೆ ಅವರು ನೇತೃತ್ವ ವಹಿಸಿದ್ದರು. ‘ಸಾಧನಾ ಮರವಂತೆ’ ಸಂಸ್ಥೆಯ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ ಜನಮನ್ನಣೆ ಗಳಿಸಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾಗಿದ್ದ ಅವರು, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ನಾಡ ರಾಬರ್ಟ್ ಝೆಡ್.ಎಂ. ಡಿಸೋಜ ಐಟಿಐ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. 

Ads on article

Advertise in articles 1

advertising articles 2

Advertise under the article