ಜು. 26: ಉಡುಪಿಯಲ್ಲಿ ಬೃಹತ್ ಮಾದರಿ ಸ್ಪರ್ಧಾತ್ಮಕ ಪರೀಕ್ಷೆ ಆಯೋಜನೆ
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸುಮಾರು 70,000 ಹುದ್ದೆಗಳ ಭರ್ತಿ ಪ್ರಕ್ರಿಯೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ, ಕರಾವಳಿಯ ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಅನುಭವ ಪಡೆಯಲು ಉಡುಪಿಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಬೃಹತ್ ಮಾದರಿ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಮುಂಬರುವ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಇತ್ಯಾದಿ ನೇಮಕಾತಿ ಪರೀಕ್ಷೆಗಳು ಭವಿಷ್ಯ ರೂಪಿಸಿಕೊಳ್ಳುವ ಉದ್ಯೋಗ ಆಕಾಂಕ್ಷಿಗಳಿಗೆ ಅತ್ಯುತ್ತಮ ವೇದಿಕೆಯಾಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವುದು, ಯುವಜನರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವುದು ಮತ್ತು ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದು ಈ ಪರೀಕ್ಷೆಯ ಮುಖ್ಯ ಉದ್ದೇಶವಾಗಿದೆ.
ಅಭಿನವ ಭಾರತ ಉಡುಪಿ ಮತ್ತು ಸ್ಪರ್ಧಾಸಾರಥಿ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜು. 26 ರಂದು ಬೆಳಿಗ್ಗೆ 9.30ಕ್ಕೆ ಉಡುಪಿಯ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಪೊಲೀಸ್ ವರಿಷ್ಠಾಧಿಕಾರಿ ಹರಿರಾಮಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ತಂತ್ರಗಳು ಮತ್ತು ಪೂರ್ವತಯಾರಿಯ ಕುರಿತು ಪೊಲೀಸ್ ಅಧಿಕಾರಿ ಆಗಿರುವ ಆಶ್ರಿತ ಶೆಟ್ಟಿ ಅವರು ವಿಶೇಷ ಪ್ರೇರಣಾ ನುಡಿಗಳನ್ನು, ಪ್ರಾಯೋಗಿಕ ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳು ಲಭ್ಯವಿದ್ದು, ನಮ್ಮ ಉಡುಪಿ ಜಿಲ್ಲೆಯ ಹಾಗೂ ಕರಾವಳಿಯ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ಈ ಮಾದರಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಆಸಕ್ತ ಯುವ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.