-->
 "ಡ್ರಗ್ಸ್ ವ್ಯಸನದಿಂದ ದೂರವಿರಿ": ಯುವಜನತೆಗೆ ನ್ಯಾಯಾಧೀಶ ನಿತಿನ್ ವೈ ರಾವ್ ಕರೆ

"ಡ್ರಗ್ಸ್ ವ್ಯಸನದಿಂದ ದೂರವಿರಿ": ಯುವಜನತೆಗೆ ನ್ಯಾಯಾಧೀಶ ನಿತಿನ್ ವೈ ರಾವ್ ಕರೆ


ಡ್ರಗ್ಸ್ ವ್ಯಸನವು ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬ, ಸಮಾಜ ಮತ್ತು ದೇಶದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.  ಹೀಗಾಗಿ ಯುವಜನತೆ ಎಚ್ಚರಿಕೆಯಿಂದಿದ್ದು, ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಿತಿನ್ ವೈ ರಾವ್ ಕರೆ ನೀಡಿದರು.


ಅವರು ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ  #RISE & ಬೇಡ BRO ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯ. "ಒಂದು ಬಾರಿ ಪ್ರಯತ್ನಿಸಿದರೆ ಏನೂ ಆಗುವುದಿಲ್ಲ" ಎಂಬ ತಪ್ಪು ಕಲ್ಪನೆಯಿಂದ ಅನೇಕ ಯುವಕರು ಡ್ರಗ್ಸ್ ವ್ಯಸನದ ಬಲೆಗೆ ಬೀಳುತ್ತಿದ್ದಾರೆ. ಸ್ನೇಹಿತರ ಪ್ರಭಾವ, ಶೈಕ್ಷಣಿಕ ಒತ್ತಡ ಹಾಗೂ ಕೆಲವು ಸಿನಿಮಾಗಳಲ್ಲಿನ ತಪ್ಪು ಸಂದೇಶಗಳ ಪ್ರಭಾವದಿಂದಲೂ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.
1985ರಲ್ಲಿ ಜಾರಿಗೆ ಬಂದಿರುವ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುವಿನ ತೂಕ ಮತ್ತು ಪ್ರಮಾಣವನ್ನು ಆಧರಿಸಿ ಶಿಕ್ಷೆ ವಿಧಿಸಲಾಗುತ್ತದೆ. ಸಣ್ಣ ಪ್ರಮಾಣದ ಮಾದಕ ವಸ್ತು ಹೊಂದಿದ್ದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹10,000ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ವಾಣಿಜ್ಯ ಪ್ರಮಾಣದ ಮಾದಕ ವಸ್ತುಗಳಿಗೆ 10ರಿಂದ 20 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷದಿಂದ ₹2 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದ್ದು, ಕೆಲವು ಪ್ರಕರಣಗಳಲ್ಲಿ ಜಾಮೀನು ದೊರೆಯದಿರುವ ಸಾಧ್ಯತೆಯೂ ಇದೆ ಎಂದು ವಿವರಿಸಿದರು. ಯುವಜನತೆ ಡ್ರಗ್ಸ್ ಜಾಲಕ್ಕೆ ಸಿಲುಕದಂತೆ ಎಲ್ಲರೂ ಜಾಗೃತರಾಗಬೇಕು. ಪೊಲೀಸ್ ಇಲಾಖೆ ಕೈಗೊಂಡಿರುವ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸಿದರೆ ಉಡುಪಿ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ನಿತಿನ್ ವೈ. ರಾವ್ ತಿಳಿಸಿದರು.


ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನರಲ್ಲಿ ಮಾದಕ ವಸ್ತುಗಳ ವ್ಯಸನವೂ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡ್ರಗ್ಸ್ ಸೇವನೆಯನ್ನು ಸಾಮಾನ್ಯ ಸಂಗತಿಯಂತೆ ಬಿಂಬಿಸಲಾಗುತ್ತಿದೆ. ಇದರಿಂದ ಪ್ರಭಾವಿತರಾಗುವ ಕೆಲ ಯುವಕರು ಮೊದಲು ಡ್ರಗ್ಸ್ ಬಳಕೆದಾರರಾಗಿ (ಯೂಸರ್) ಆರಂಭಿಸಿ, ನಂತರ ಮಾದಕ ವಸ್ತುಗಳ ಮಾರಾಟಗಾರರಾಗಿ (ಪೆಡ್ಲರ್) ಬದಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಕೇವಲ ವ್ಯಕ್ತಿಯ ಬದುಕಿಗಷ್ಟೇ ಅಲ್ಲ, ಇಡೀ ಸಮಾಜಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಸಿದರು. ಯುವಜನತೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಿ, ಯಾವುದೇ ಕಾರಣಕ್ಕೂ ಅದರ ಬಲೆಗೆ ಬೀಳಬಾರದು ಎಂದು ಅವರು ಕರೆ ನೀಡಿದರು. 
ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟ ಅಥವಾ ಸೇವನೆ ಕಂಡುಬಂದರೆ ಸಾರ್ವಜನಿಕರು ಕೂಡಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು. ಸಾರ್ವಜನಿಕರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಈ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಎಸ್‌ಪಿ ಹರಿರಾಂ ಶಂಕರ್ ಮನವಿ ಮಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, "ನಾವು ಹೇಗಿರಬೇಕು ಎಂಬುದು ನಮ್ಮ ಕೈಯಲ್ಲಿದೆ. ಅದೇ ರೀತಿ ಡ್ರಗ್ಸ್‌ನಂತಹ ದುಶ್ಚಟಗಳಿಗೆ ಬಲಿಯಾಗದಿರುವುದೂ ನಮ್ಮ ನಿರ್ಧಾರವೇ ಆಗಿದೆ. ಒಮ್ಮೆ ಚಟ ಬೆಳೆದರೆ ಅದು ಮನುಷ್ಯನನ್ನು ಚಟ್ಟಕ್ಕೇರುವವರೆಗೂ ಬಿಡುವುದಿಲ್ಲ. ಆದ್ದರಿಂದ ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು" ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸರ್ಜನ್ ಡಾ. ಅಶೋಕ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ರವೀಂದ್ರ ಉಪಾಧ್ಯಾಯ, ಜಾರ್ಜ್ ಸರ್ವ ಕಾಲೇಜು ಕೋ ಆರ್ಡಿನೇಟರ್ ಸೋಜನ್, ಯುವಜನ ಮತ್ತು ಕ್ರೀಡಾ ಸಬಲೀಕರಣ ನಿರ್ದೇಶಕ ಡಾ. ರೋಶನ್ ಶೆಟ್ಟಿ, ನಿತ್ಯಾನಂದ ಗಾಂವ್ಕರ್, ಕುಂದಾಪುರ ಶ್ರೀಮಾತಾ ಆಸ್ಪತ್ರೆ ವೈದ್ಯ ಡಾ. ಪ್ರಕಾಶ್ ತೋಳಾರ್, ರವೀಂದ್ರ ಉಪಾಧ್ಯಾಯ, ಡಾ. ಜಿ. ಶಂಕರ್ ಕಾಲೇಜಿನ ಪ್ರಾಂಶುಪಾಲೆ ನಿಖಿತಾ, ಮಂಜುನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಪ್ರತಿಜ್ನಾ ವಿಧಿ ಬೋಧಿಸಿದರು. 

ಉಡುಪಿ ನಗರ ಠಾಣೆಯ ಸಿಬ್ಬಂದಿ ರಮೇಶ್ ಪ್ರಾರ್ಥಿಸಿದರು. ಕುಂದಾಪುರ ಪೊಲೀಸ್ ಉಪವಿಭಾಗದ ಪ್ರಸ್ತುತ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಸ್ವಾಗತಿಸಿ, ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ರಾಘವೇಂದ್ರ ಧನ್ಯವಾದ ಸಮರ್ಪಿಸಿದರು. 





Ads on article

Advertise in articles 1

advertising articles 2

Advertise under the article