-->
ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಬರ್ಬರ ಹತ್ಯೆ; ಆರೋಪಿ ಪರಾರಿ

ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಬರ್ಬರ ಹತ್ಯೆ; ಆರೋಪಿ ಪರಾರಿ


ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಯುವತಿಯೊಬ್ಬಳನ್ನು ಹಲ್ಲೆ ನಡೆಸಿ ಬರ್ಬರ ಹತ್ಯೆಗೈದ ಘಟನೆ ಸಂಭವಿಸಿದೆ. 

ಮೃತರನ್ನು ಕಕ್ಯಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾವಣ್ಯ ಅವರು ಕಕ್ಯಪದವು ಕಡೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಬ್ಬರಿಗೆ ಕರೆ ಮಾಡಿ, "ತನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ" ಎಂದು ತಿಳಿಸಿದ್ದು, ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.


ಬಸ್‌ನಲ್ಲಿದ್ದ ಪ್ರಯಾಣಿಕರ ಮಾಹಿತಿಯಂತೆ, ಲಾವಣ್ಯ ಬಸ್‌ನಿಂದ ಕೆಳಗಿಳಿದಿದ್ದು, ಆ ಯುವಕ ಕೂಡ ಅವರನ್ನು ಬೆನ್ನಟ್ಟಿದ್ದಾನೆ. ತನ್ನ ಬ್ಯಾಗ್‌ನಿಂದ ಹರಿತವಾದ ಆಯುಧವನ್ನು ಹೊರತೆಗೆದ ಆರೋಪಿಯು ಯುವತಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಲಾವಣ್ಯ ಓಡಿ ಹೋಗಲು ಯತ್ನಿಸಿದರೂ, ಆರೋಪಿ ಮಾರಕವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯಿಂದ ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಹತ್ಯೆಗೆ ನಿಖರ ಕಾರಣವೇನು ಹಾಗೂ ಘಟನೆಯ ಹಿನ್ನೆಲೆ ಏನು ಎಂಬ ಕುರಿತು ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article