ನಾಗರ ಪಂಚಮಿ ದಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ: ಡಿಸಿಗೆ ಯಶ್ಪಾಲ್ ಸುವರ್ಣ ಮನವಿ
ನಾಗರ ಪಂಚಮಿ ಹಬ್ಬದಂದು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ರಜೆ ಘೋಷಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 17ರಂದು ಆಚರಿಸಲಾಗುವ ನಾಗರ ಪಂಚಮಿ ದಿನ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಸ್ಥಳೀಯ ರಜೆ ಘೋಷಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ನಾಗರ ಪಂಚಮಿಯು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ವಿವಿಧೆಡೆ ನೆಲೆಸಿರುವ ಕುಟುಂಬ ಸದಸ್ಯರನ್ನು ಒಂದೆಡೆ ಸೇರಿಸುವ ಅಪರೂಪದ ಹಬ್ಬವಾಗಿದೆ. ಈ ದಿನ ಕುಟುಂಬದ ಸದಸ್ಯರು ಮಾತೃ ಹಾಗೂ ಪಿತೃ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ, ನಾಗದೇವರಿಗೆ ತನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಇದರಿಂದ ಕುಟುಂಬದ ಬಂಧಗಳು ಮತ್ತಷ್ಟು ಗಟ್ಟಿಯಾಗುವುದರ ಜೊತೆಗೆ ಸಾಂಪ್ರದಾಯಿಕ ಆಚರಣೆಗಳಿಗೂ ಉತ್ತೇಜನ ದೊರೆಯುತ್ತದೆ.
ಕರಾವಳಿಯ ಬಹುತೇಕ ಕುಟುಂಬಗಳಿಗೆ ಮೂಲ ನಾಗಬನಗಳಿದ್ದು, ಹಿರಿಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ನಾಗದೇವರಿಗೆ ಹಾಲೆರೆಯುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಪುರಾಣಗಳಲ್ಲಿ ತುಳುನಾಡನ್ನು ‘ನಾಗರಖಂಡ’ ಎಂದು ಉಲ್ಲೇಖಿಸಲಾಗಿದ್ದು, ನಾಗಾರಾಧನೆ ಇಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಪಾರಂಪರಿಕ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಯುವಪೀಳಿಗೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುವಂತೆ ನಾಗರ ಪಂಚಮಿ ದಿನ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ರಜೆ ಘೋಷಿಸುವಂತೆ ಸಾರ್ವಜನಿಕರ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.