ಮಿಸ್ ಯೂನಿವರ್ಸ್ ಇಂಡಿಯಾ ಟಾಪ್-50ರಲ್ಲಿ ಸ್ಥಾನ ಪಡೆದ ಉಡುಪಿಯ ಸ್ಪೂರ್ತಿ ಶೆಟ್ಟಿ
ಕರಾವಳಿಯ ಹೆಮ್ಮೆಯ ಪ್ರತಿಭೆ, ಉಡುಪಿ ಮೂಲದ ಸ್ಪೂರ್ತಿ ಶೆಟ್ಟಿ ಅವರು ದೇಶದ ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ಟಾಪ್-50 ಸ್ಪರ್ಧಿಗಳಲ್ಲಿ ಸ್ಥಾನ ಪಡೆಯುವ ಮೂಲಕ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.
ಕನಸು ಕಂಡರೆ ಸಾಕಾಗುವುದಿಲ್ಲ, ಅದನ್ನು ಸಾಕಾರಗೊಳಿಸಲು ವರ್ಷಗಳ ಕಾಲ ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ತಾಳ್ಮೆ ಬೇಕು ಎಂಬುದಕ್ಕೆ ಉಡುಪಿ ಮೂಲದ ಸ್ಪೂರ್ತಿ ಶೆಟ್ಟಿ ಉದಾಹರಣೆ. ತನ್ನ 14ನೇ ವಯಸ್ಸಿನಲ್ಲೇ ಸೌಂದರ್ಯ ಸ್ಪರ್ಧೆಗಳ ಲೋಕಕ್ಕೆ ಕಾಲಿಟ್ಟಿದ್ದ ಸ್ಪೂರ್ತಿ, ಹಲವು ಸೋಲು-ಗೆಲುವುಗಳನ್ನು ಎದುರಿಸಿ ಇಂದು ದೇಶದ ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ.
ಸೌಂದರ್ಯ ಸ್ಪರ್ಧೆಯ ಪಯಣ ಸ್ಪೂರ್ತಿಗೆ ಸುಲಭವಾಗಿರಲಿಲ್ಲ. ಹಲವು ವರ್ಷಗಳ ನಿರಂತರ ಅಭ್ಯಾಸ, ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಪ್ರಯತ್ನ ಮತ್ತು ಅಚಲ ಸಂಕಲ್ಪದ ಫಲವಾಗಿ 2018ರಿಂದ ವಿವಿಧ ರಾಷ್ಟ್ರೀಯ ಪೇಜೆಂಟ್‌ಗಳಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು. ಅಲ್ಲಿಂದ ಆರಂಭವಾದ ಅವರ ಸಾಧನೆಯ ಪಯಣ ಒಂದೊಂದೇ ಮೆಟ್ಟಿಲು ಏರುತ್ತಾ ಇಂದು ರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮಟ್ಟಕ್ಕೆ ತಲುಪಿದೆ.
ಸ್ಪೂರ್ತಿ ಶೆಟ್ಟಿ ಅವರು 2020ರಲ್ಲಿ "ಕ್ವೀನ್ ಆಫ್ ಕರ್ನಾಟಕ" ಕಿರೀಟ ಮುಡಿಗೇರಿಸಿಕೊಂಡರೆ, 2021ರಲ್ಲಿ "ಮಿಸ್ ಇಂಟರ್‌ನ್ಯಾಷನಲ್ ಯೂನಿವರ್ಸ್" ಸ್ಪರ್ಧೆಯಲ್ಲಿ ಪ್ರಥಮ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ನಂತರ 2024ರ "ಮಿಸ್ ಗ್ರ್ಯಾಂಡ್ ಇಂಡಿಯಾ" ಸ್ಪರ್ಧೆಯಲ್ಲಿ ಟಾಪ್-11 ಸ್ಪರ್ಧಿಗಳಲ್ಲಿ ಸ್ಥಾನ ಪಡೆದು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
2025ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್-10 ಸ್ಪರ್ಧಿಗಳಲ್ಲಿ ಸ್ಥಾನ ಗಳಿಸಿದ್ದ ಸ್ಪೂರ್ತಿ, ಈ ಬಾರಿ 2026ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅವಕಾಶ ಪಡೆದಿದ್ದಾರೆ. ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಅಂತಿಮವಾಗಿ ಟಾಪ್-50 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ಭಾರತದ ವಿವಿಧ ರಾಜ್ಯಗಳಿಂದ ಸ್ಪರ್ಧಿಸಿದ್ದ ನೂರಾರು ಸ್ಪರ್ಧಿಗಳ ಪೈಕಿ ಆಯ್ಕೆಯಾದ ಪ್ರತಿಭಾವಂತ ಸ್ಪರ್ಧಿಗಳಲ್ಲಿ ಅಂತಿಮ ಟಾಪ್-50 ಪಟ್ಟಿಗೆ ಸ್ಪೂರ್ತಿ ಶೆಟ್ಟಿ ಆಯ್ಕೆಯಾಗಿರುವುದು ಉಡುಪಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಮೂಲಕ ರಾಷ್ಟ್ರೀಯ ಮಟ್ಟದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವೂ ಅವರಿಗೆ ದೊರೆತಿದೆ.
ಜುಲೈ 18ರಿಂದ ಆಗಸ್ಟ್ 23ರವರೆಗೆ ನಡೆಯಲಿರುವ ಸುಮಾರು 40 ದಿನಗಳ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆ ಹಲವು ಹಂತಗಳಲ್ಲಿ ಸಾಗಲಿದೆ. ಗ್ರೂಮಿಂಗ್ ಸೆಷನ್‌ಗಳು, ವ್ಯಕ್ತಿತ್ವ ವಿಕಸನ, ಫ್ಯಾಷನ್ ಪ್ರದರ್ಶನ, ಪ್ರತಿಭಾ ಪ್ರದರ್ಶನ, ಸಂದರ್ಶನ, ಸಾಮಾಜಿಕ ಜವಾಬ್ದಾರಿ ಹಾಗೂ ವಿವಿಧ ಸುತ್ತುಗಳ ಮೂಲಕ ಸ್ಪರ್ಧಿಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಈ ಬಹುಹಂತದ ಸ್ಪರ್ಧೆಯ ಅಂತಿಮ ಘಟ್ಟ ಆಗಸ್ಟ್ 23ರಂದು ನವದೆಹಲಿಯಲ್ಲಿ ನಡೆಯಲಿದ್ದು, ಅಂದು ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟದ ವಿಜೇತೆಯನ್ನು ಘೋಷಿಸಲಾಗುತ್ತದೆ. ದೇಶದ ಅತ್ಯುತ್ತಮ ಪ್ರತಿಭೆಗಳೊಂದಿಗೆ ಸ್ಪರ್ಧಿಸಲಿರುವ ಸ್ಪೂರ್ತಿ ಶೆಟ್ಟಿ ಉತ್ತಮ ಪ್ರದರ್ಶನ ನೀಡುವ ಉತ್ಸುಕತೆಯಲ್ಲಿ ಸಕಲ ತಯಾರಿಗಳನ್ನೂ ನಡೆಸಿಕೊಂಡಿದ್ದಾರೆ.ಸ್ಪರ್ಧೆಯ ತಯಾರಿಯ ಕುರಿತು ಇಂದು ಮಾಧ್ಯಮದವರೊಂದಿಗೆ ಸ್ಪೂರ್ತಿ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಸಾಧನೆಗೆ ತಂದೆ, ತಾಯಿ ಕುಟುಂಬಿಕರು ಹಾಗೂ ಸಹೋದರ ಮಂಜಿತ್ ಶೆಟ್ಟಿಯ ಬೆಂಬಲವನ್ನು ಈ ವೇಳೆ ಸ್ಮರಿಸಿದರು.
ಸೌಂದರ್ಯ ಮಾತ್ರವಲ್ಲದೆ ಆತ್ಮವಿಶ್ವಾಸ, ನಾಯಕತ್ವ, ಸಂವಹನ ಕೌಶಲ್ಯ, ಸಾಮಾಜಿಕ ಕಳಕಳಿ ಮತ್ತು ಸಮಗ್ರ ವ್ಯಕ್ತಿತ್ವವನ್ನು ಆಧರಿಸಿ ನಡೆಯುವ ಈ ಸ್ಪರ್ಧೆಯಲ್ಲಿ ಟಾಪ್-50ಕ್ಕೆ ಆಯ್ಕೆಯಾಗಿರುವುದೇ ಮಹತ್ವದ ಸಾಧನೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಪೂರ್ತಿ ಶೆಟ್ಟಿ ಅವರ ಸಾಧನೆ ರಾಜ್ಯದ ಯುವಜನತೆಗೆ ಪ್ರೇರಣೆಯಾಗಿದ್ದು, ಉಡುಪಿ ಜಿಲ್ಲೆಯ ಜನರಲ್ಲಿ ಸಂತಸ ಮತ್ತು ಹೆಮ್ಮೆ ಮೂಡಿಸಿದೆ.
ಹಲವು ವರ್ಷಗಳ ನಿರಂತರ ಪರಿಶ್ರಮ, ಸೋಲನ್ನು ಮೆಟ್ಟಿನಿಂತ ಆತ್ಮವಿಶ್ವಾಸ ಮತ್ತು ಗುರಿಯತ್ತ ಅಚಲವಾದ ನಂಬಿಕೆಯೊಂದಿಗೆ ಸಾಗಿದ ಸ್ಪೂರ್ತಿ ಶೆಟ್ಟಿ ಅವರ ಪಯಣ ಇಂದು ಅನೇಕ ಯುವತಿಯರಿಗೆ ಸ್ಫೂರ್ತಿಯಾಗಿದೆ. ಇದೀಗ ದೇಶದ ಪ್ರತಿಷ್ಠಿತ ವೇದಿಕೆಯಲ್ಲಿ ಕರ್ನಾಟಕದ ಕನಸನ್ನು ಹೊತ್ತು ಸಾಗುತ್ತಿರುವ ಸ್ಪೂರ್ತಿ ಶೆಟ್ಟಿ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಲಿ ಎನ್ನುವುದು ಎಲ್ಲರ ಹಾರೈಕೆ.

.jpeg)