ಖೋಟಾ ನೋಟು ತಯಾರಿಕಾ ಸ್ಥಳಕ್ಕೆ ಪೊಲೀಸರ ದಾಳಿ: 7 ಆರೋಪಿಗಳ ಬಂಧನ
Thursday, July 16, 2026
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಖೋಟಾ ನೋಟು ತಯಾರಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದ್ಮುಂಜ–ಕೊರಿಂಜ ಸಮೀಪದ ಅಡೆಂಜ ಪ್ರದೇಶದಲ್ಲಿ ಖೋಟಾ ನೋಟು ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
ದಾಳಿಯ ವೇಳೆ ಖೋಟಾ ನೋಟು ತಯಾರಿಕೆಯಲ್ಲಿ ತೊಡಗಿದ್ದ ಆರೋಪಿ ಸಹಿತ ಈ ಕೃತ್ಯಕ್ಕೆ ಬಳಸಲಾಗಿದ್ದ ಬಾಡಿಗೆ ಕಟ್ಟಡವನ್ನು ಒದಗಿಸಿದ್ದ ಸ್ಥಳೀಯ ವ್ಯಕ್ತಿಯನ್ನೂ ಸೇರಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯ ವೇಳೆ ಒಂದು ಬದಿಯಲ್ಲಿ ಮಾತ್ರ ಮುದ್ರಣಗೊಂಡಿದ್ದ ಖೋಟಾ ನೋಟುಗಳು ಹಾಗೂ ಖೋಟಾ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ಮುದ್ರಣ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.