-->
 ವಂದೇ ಮಾತರಂ 150ನೇ ಸಂಭ್ರಮಾಚರಣೆ: ರಾಷ್ಟ್ರಭಕ್ತಿ, ಸಂಸ್ಕೃತಿ ಸಾರಿದ ಯುವ ರಂಗೋತ್ಸವ

ವಂದೇ ಮಾತರಂ 150ನೇ ಸಂಭ್ರಮಾಚರಣೆ: ರಾಷ್ಟ್ರಭಕ್ತಿ, ಸಂಸ್ಕೃತಿ ಸಾರಿದ ಯುವ ರಂಗೋತ್ಸವ


ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಗೆ ಸಮಾನವಾದ ಗೌರವ ಮತ್ತು ಪ್ರಾಮುಖ್ಯತೆ ದೊರೆತಿರುವುದು ದೇಶದ ಹೆಮ್ಮೆಯ ಸಂಗತಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ‘ವಂದೇ ಮಾತರಂ’ 150ನೇ ಸಂಭ್ರಮಾಚರಣೆ ಹಾಗೂ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಅಂಗವಾಗಿ ನಡೆದ ಯುವ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಂದೇ ಮಾತರಂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸಿದ ಶಕ್ತಿಯುತ ಗೀತೆ. ಒಂದು ಕಾಲದಲ್ಲಿ ಇದನ್ನು ಹಾಡುವ ಕುರಿತು ವಿವಾದಗಳಿದ್ದರೂ, ಇಂದು ದೇಶದಾದ್ಯಂತ ಸಾವಿರಾರು ಕಲಾವಿದರು ಹಾಗೂ ಲಕ್ಷಾಂತರ ಜನರು ಒಂದೇ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಈ ಮಹತ್ವದ ಕಾರ್ಯಕ್ರಮವನ್ನು ಉಡುಪಿಗೆ ತಂದಿರುವ ರಂಗಭೂಮಿ ಉಡುಪಿ ಸಂಸ್ಥೆಯನ್ನು ಅಭಿನಂದಿಸಿದರು.

ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಯುವಜನರಲ್ಲಿ ಭಾರತೀಯ ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ವಂದೇ ಮಾತರಂ ಸ್ವಾತಂತ್ರ್ಯ ಚಳವಳಿಯ ವೇಳೆ ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.

ಪ್ರೊ. ಪವನ್ ಕಿರಣ್ ಕೆರೆ ಅವರು ವಂದೇ ಮಾತರಂ ಕುರಿತು ವಿಶೇಷ ಉಪನ್ಯಾಸ ನೀಡಿ, ಭಾರತೀಯ ರಂಗಭೂಮಿಯ ಮೂಲಕ ದೇಶಪ್ರೇಮ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಸಾರುವ ಉದ್ದೇಶದಿಂದ ದೇಶಾದ್ಯಂತ 150 ರಂಗಪ್ರಯೋಗಗಳನ್ನು ಆಯೋಜಿಸಲಾಗಿದೆ ಎಂದರು. ಕವಿ ಕಾಳಿದಾಸರ ಜಯಂತಿಯನ್ನು ಈ ಉತ್ಸವದೊಂದಿಗೆ ಸಂಯೋಜಿಸಲಾಗಿದ್ದು, 39ಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳಲ್ಲಿ ರಂಗಪ್ರಯೋಗಗಳು ನಡೆಯಲಿವೆ. ದೇಶದ 150ಕ್ಕೂ ಹೆಚ್ಚು ಸಂಸ್ಥೆಗಳು ಈ ಮಹೋತ್ಸವದಲ್ಲಿ ಭಾಗಿಯಾಗಿವೆ ಎಂದು ತಿಳಿಸಿದರು.

ಮಹಾಕವಿ ಕಾಳಿದಾಸರ ಕುರಿತು ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನ ನಿರ್ದೇಶಕ ಹಾಗೂ ಚಿಂತಕ ಪ್ರಭಾಕರ್ ಜಿ.ಪಿ. ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಡಿ, ಗುರುರಾಜ ಗಂಟಿಹೊಳೆ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಯುವ ರಂಗೋತ್ಸವದ ಅಂಗವಾಗಿ ‘ಸ್ವಾತಂತ್ರ್ಯ ಶರಧಿ’ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.

Ads on article

Advertise in articles 1

advertising articles 2

Advertise under the article