-->
ಪೆರಂಪಳ್ಳಿ ಶೀಂಬ್ರಾ  ಸೇತುವೆ ಅಕ್ರಮ ಚಟುವಟಿಕೆಗಳ ತಾಣ: ಸೂಕ್ತ ಕ್ರಮಕ್ಕೆ ಆಗ್ರಹ

ಪೆರಂಪಳ್ಳಿ ಶೀಂಬ್ರಾ ಸೇತುವೆ ಅಕ್ರಮ ಚಟುವಟಿಕೆಗಳ ತಾಣ: ಸೂಕ್ತ ಕ್ರಮಕ್ಕೆ ಆಗ್ರಹ


ಉಡುಪಿಯ ಕೊಳಲಗಿರಿ–ಪರಾರಿ ಮಾರ್ಗವಾಗಿ ಮಣಿಪಾಲವನ್ನು ಸಂಪರ್ಕಿಸುವ ಪೆರಂಪಳ್ಳಿ (ಶೀಂಬ್ರಾ) ಸೇತುವೆ ಸಂಜೆಯಾದ ಬಳಿಕ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಆತಂಕ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆರೋಪಿಸಿದ್ದಾರೆ.


ಸೇತುವೆಯ ಮೇಲೆ ವಾಹನಗಳನ್ನು ನಿಲ್ಲಿಸಿ ಕೆಲವರು ಗುಂಪುಗೂಡಿ ಮದ್ಯಪಾನ ಮಾಡುವುದು, ಅಸಭ್ಯ ಚಟುವಟಿಕೆಗಳಲ್ಲಿ ತೊಡಗುವುದು ಹಾಗೂ ಬಿಯರ್ ಬಾಟಲಿಗಳು ಮತ್ತು ಇತರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡುವುದು ದಿನನಿತ್ಯದ ದೃಶ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರು ಹಾಗೂ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.


ಕಳೆದ ಒಂದು ವರ್ಷದಿಂದ ಸೇತುವೆಯ ಮೇಲಿನ ಬೀದಿ ದೀಪಗಳು ಕಾರ್ಯನಿರ್ವಹಿಸದೇ ಇರುವುದರಿಂದ ರಾತ್ರಿ ವೇಳೆ ಸಂಪೂರ್ಣ ಕತ್ತಲೆ ಆವರಿಸುತ್ತಿದ್ದು, ಅಪಘಾತಗಳ ಸಂಭವ ಹೆಚ್ಚಾಗಿದೆ. ಈ ಕುರಿತು ಈಗಾಗಲೇ ಉಡುಪಿ ಶಾಸಕ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಸತೀಶ್ ಪೂಜಾರಿ ಕೀಳಂಜೆ ಬೇಸರ ವ್ಯಕ್ತಪಡಿಸಿದ್ದಾರೆ.


ಸಂಬಂಧಪಟ್ಟ ಇಲಾಖೆಗಳು ತಕ್ಷಣ ಮಧ್ಯಪ್ರವೇಶಿಸಿ ಪೆರಂಪಳ್ಳಿ (ಶೀಂಬ್ರಾ) ಸೇತುವೆಯನ್ನು ದುರಸ್ತಿ ಮಾಡಿ ಅಭಿವೃದ್ಧಿಪಡಿಸಬೇಕು. ಸೇತುವೆಯ ಮೇಲೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕೆಟ್ಟುಹೋಗಿರುವ ಬೀದಿ ದೀಪಗಳನ್ನು ತಕ್ಷಣ ದುರಸ್ತಿ ಮಾಡಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಸೇತುವೆಯ ಮೇಲಿನ ಕಸ, ಬಿಯರ್ ಬಾಟಲಿಗಳು ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಜೊತೆಗೆ, ಸೇತುವೆಯ ಎರಡೂ ಬದಿಯ ರಸ್ತೆಗಳ ಪಕ್ಕದಲ್ಲಿರುವ ಪೊದೆಗಳನ್ನು ತೆರವುಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದಲ್ಲದೆ, ಸೇತುವೆಯ ಮೇಲೆ ವಾಹನಗಳನ್ನು ನಿಲ್ಲಿಸಿ ಅಕ್ರಮವಾಗಿ ಗುಂಪುಗೂಡಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article