-->
ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ: ಬಂಟ್ವಾಳದ ಯುವಕ ಸೇರಿ ಭಾರತೀಯ ಸಿಬ್ಬಂದಿಗಳು ಸುರಕ್ಷಿತ

ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ: ಬಂಟ್ವಾಳದ ಯುವಕ ಸೇರಿ ಭಾರತೀಯ ಸಿಬ್ಬಂದಿಗಳು ಸುರಕ್ಷಿತ


ಒಮಾನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಜುಲೈ 12ರ ಮಧ್ಯರಾತ್ರಿ ಕ್ಷಿಪಣಿ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಒಮಾನ್ ನೌಕಾಪಡೆ ಸುರಕ್ಷಿತವಾಗಿ ರಕ್ಷಿಸಿದೆ. ರಕ್ಷಿಸಲ್ಪಟ್ಟವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರಚನ್ ಆರ್.ಕೆ. (25) ಕೂಡ ಸೇರಿದ್ದಾರೆ.

ಪ್ರಸ್ತುತ ರಚನ್ ಅವರು ಒಮಾನ್‌ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ತಾವು ದುಬೈಗೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ರಚನ್ ಅವರು ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರೋಹಿತಾಕ್ಷ ಬಾಣಬೆಟ್ಟು ಅವರ ಮೂವರು ಮಕ್ಕಳಲ್ಲಿ ಕಿರಿಯವರಾಗಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮುಂಬೈನಲ್ಲಿ ಮೆರೈನ್ ಕೋರ್ಸ್ ಮಾಡಿ ಹಡಗು ಸೇವೆಗೆ ಸೇರಿದ್ದರು.

ಘಟನೆಯ ಕುರಿತು ತಂದೆಯೊಂದಿಗೆ ಮಾತನಾಡಿದ ರಚನ್, ಹಡಗಿನ ಮೇಲೆ ದಾಳಿ ಸಂಭವಿಸುವ ಸಾಧ್ಯತೆ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಹಡಗು ಒಮಾನ್ ಕರಾವಳಿಯುದ್ದಕ್ಕೂ ತನ್ನ ಸಂಚಾರ ಮುಂದುವರಿಸಿತ್ತು. ಭಾನುವಾರ ಮುಂಜಾನೆ ಸುಮಾರು 2.05 ಗಂಟೆಗೆ ಕ್ಷಿಪಣಿಯೊಂದು ಹಡಗಿಗೆ ಅಪ್ಪಳಿಸಿದ್ದು, ಅದರ ಪರಿಣಾಮ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ನಿದ್ರೆಯಲ್ಲಿದ್ದ ಸಿಬ್ಬಂದಿ ಎಚ್ಚೆತ್ತು ಜೀವ ರಕ್ಷಕ ದೋಣಿಗಳ ಮೂಲಕ ಸಮುದ್ರಕ್ಕೆ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೊಂದಲದ ವೇಳೆ ಪುಣೆ ಮೂಲದ ಓರ್ವ ಸಿಬ್ಬಂದಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬಳಿಕ ಒಮಾನ್ ನೌಕಾಪಡೆ ಸ್ಥಳಕ್ಕೆ ಧಾವಿಸಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಿಸಿ ಅಗತ್ಯ ನೆರವು ನೀಡಿದೆ.

Ads on article

Advertise in articles 1

advertising articles 2

Advertise under the article