ಉಡುಪಿಯ ಗ್ಯಾನ್ ಜಿ ಪಾಲನ್‌ಗೆ "ಇಸ್ಕಾನ್ ವ್ಯಾಲ್ಯೂ ಎಜುಕೇಶನ್" ರಾಷ್ಟ್ರೀಯ ಪುರಸ್ಕಾರ
Monday, July 13, 2026
ಉಡುಪಿಯ ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ ಗ್ಯಾನ್ ಜಿ ಪಾಲನ್ ಅವರು "ಇಸ್ಕಾನ್ ವ್ಯಾಲ್ಯೂ ಎಜುಕೇಶನ್" ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಭಾರತದಾದ್ಯಂತ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ ಕೇವಲ 120 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ ಕೊಡವೂರು ಬಾಚನಬೈಲು ನಿವಾಸಿಗಳಾದ ಗಣೇಶ್ ಹಾಗೂ ಅಂಬಾ ಜಿ ಪಾಲನ್ ದಂಪತಿಯ ಪುತ್ರ ಗ್ಯಾನ್ ಜಿ ಪಾಲನ್ ಅವರು ವ್ಯಾಲ್ಯೂ ಎಜುಕೇಶನ್ ವಿಭಾಗದಲ್ಲಿ ಮೊದಲ ರ್ಯಾಂಕ್ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಈ ಸಾಧನೆಗಾಗಿ ಬೆಂಗಳೂರಿನ ಶೇಷಾದ್ರಿಯಲ್ಲಿರುವ ಇಸ್ಕಾನ್‌ನಲ್ಲಿ ನಡೆದ ಸಮಾರಂಭದಲ್ಲಿ, ಮಂಗಳಯಾನ ಯೋಜನೆಯ ರೂವಾರಿಗಳಲ್ಲಿ ಒಬ್ಬರಾದ ಹಾಗೂ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು ಗ್ಯಾನ್ ಜಿ ಪಾಲನ್ ಅವರಿಗೆ "ಇಸ್ಕಾನ್ ವ್ಯಾಲ್ಯೂ ಎಜುಕೇಶನ್" ಪ್ರಶಸ್ತಿ ಪತ್ರ, ಸೈಕಲ್ ಹಾಗೂ ಅಪ್‌ಗ್ರೇಡ್ ಇಸ್ರೋ ವಿಸಿಟ್ ಅವಕಾಶ ನೀಡಿ ಗೌರವಿಸಿದರು.
ಗ್ಯಾನ್ ಜಿ ಪಾಲನ್ ಅವರ ಈ ಅಪೂರ್ವ ಸಾಧನೆಗೆ ಪೋಷಕರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
