-->
 ಬಿಜೆಪಿ ಮಹಿಳಾ ಮೋರ್ಚಾದಿಂದ ಅಂಬಲಪಾಡಿ ಗದ್ದೆಯಲ್ಲಿ ಸಾಮೂಹಿಕ ‘ನಟ್ಟಿ’ ಕಾರ್ಯಕ್ರಮ

ಬಿಜೆಪಿ ಮಹಿಳಾ ಮೋರ್ಚಾದಿಂದ ಅಂಬಲಪಾಡಿ ಗದ್ದೆಯಲ್ಲಿ ಸಾಮೂಹಿಕ ‘ನಟ್ಟಿ’ ಕಾರ್ಯಕ್ರಮ


ಗ್ರಾಮೀಣ ಪ್ರದೇಶಗಳ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಕೃಷಿ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಅವುಗಳನ್ನು ಉಳಿಸಿ ಬೆಳೆಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.


ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷೆ ನೀತಾ ಪ್ರಭು ಅವರ ನೇತೃತ್ವದಲ್ಲಿ ಅಂಬಲಪಾಡಿ ಬಂಕೇರ್ಕಟ್ಟ ಗದ್ದೆಯಲ್ಲಿ ಸ್ಥಳೀಯ ಕಾರ್ಯಕರ್ತರ ಸಹಕಾರದೊಂದಿಗೆ ಆಯೋಜಿಸಿದ್ದ ಸಾಮೂಹಿಕ ನೇಜಿ ನೆಡುವ ‘ನಟ್ಟಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.



ಗ್ರಾಮೀಣ ಗದ್ದೆಯಲ್ಲಿ ಸಾಮೂಹಿಕವಾಗಿ ನೇಜಿ ನೆಡುವ ಕಾರ್ಯಕ್ರಮದ ಜೊತೆಗೆ ಹಿರಿಯ ಕೃಷಿಕರನ್ನು ಗೌರವಿಸುವ ಮೂಲಕ ಕೃಷಿ ಸಂಸ್ಕೃತಿಯನ್ನು ಪ್ರೋತ್ಸಾಹಿಸಿರುವ ಬಿಜೆಪಿ ಮಹಿಳಾ ಮೋರ್ಚಾದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಪೇಡ್ ಮಾ ಕೆ ನಾಮ್’ ಕರೆಯಂತೆ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದೊಂದಿಗೆ ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಚಿಂತನೆಯ ಆಧಾರದಲ್ಲಿ ಸಮಾಜಮುಖಿ ಸೇವೆ ಹಾಗೂ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಯಶ್ಪಾಲ್ ಸುವರ್ಣ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಗತಿಪರ ಕೃಷಿಕರಾದ ಸರೋಜಿನಿ ಪೂಜಾರ್ತಿ, ಜಾನಕಿ ಪೂಜಾರ್ತಿ, ಭವಾನಿ ಪೂಜಾರ್ತಿ, ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಸವಿತಾ ಸಂತೋಷ್ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವಾಣಿ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಐಆರ್ ಮಂಗಳೂರು ವಿಭಾಗ ಸಂಚಾಲಕ ಕೆ. ಉದಯಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಂದುಬೆಟ್ಟು, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಅಮೀನ್, ನಗರ ಎಸ್.ಟಿ. ಮೋರ್ಚಾ ಅಧ್ಯಕ್ಷೆ ಸುಮಾ ನಾಯ್ಕ್, ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಸ್ಥಳೀಯ ಯುವಕ-ಯುವತಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಪ್ರದಾಯಿಕವಾಗಿ ಗದ್ದೆಗೆ ಹಾಲೆರೆಯುವ ಮೂಲಕ ಸಾಮೂಹಿಕ ನೇಜಿ ನೆಡುವ ‘ನಟ್ಟಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸ್ಥಳೀಯ ಮಹಿಳೆಯರ ಸಹಕಾರದೊಂದಿಗೆ ವಾಣಿ ಪ್ರಭಾಕರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಸಾಮೂಹಿಕ ಸಹಭೋಜನದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

Ads on article

Advertise in articles 1

advertising articles 2

Advertise under the article