-->
 ಪದವಿಯೊಂದಿಗೆ ಮಾನವೀಯ ಗುಣವನ್ನು ಬೆಳೆಸಿಕೊಳ್ಳಿ– ಡಾ. ಮಹಾಬಲೇಶ್ವರ ರಾವ್

ಪದವಿಯೊಂದಿಗೆ ಮಾನವೀಯ ಗುಣವನ್ನು ಬೆಳೆಸಿಕೊಳ್ಳಿ– ಡಾ. ಮಹಾಬಲೇಶ್ವರ ರಾವ್


ಕೇವಲ ಪದವಿ ಪಡೆಯುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಅಗತ್ಯ ಕೌಶಲ್ಯಗಳ ತರಬೇತಿಯನ್ನು ಪಡೆದು, ಶೈಕ್ಷಣಿಕ ಪಠ್ಯದೊಂದಿಗೆ ಸಮಕಾಲೀನ ವಿದ್ಯಮಾನಗಳ ಅರಿವನ್ನೂ ಹೊಂದಿರಬೇಕು ಎಂದು ಡಾ. ಮಹಾಬಲೇಶ್ವರ ಹೇಳಿದರು.


ಅವರು ಉಡುಪಿಯ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂರು ದಿನಗಳ ಸನಿವಾಸ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮರ್ಥ್ಯವನ್ನು ಬೆಳೆಸಿಕೊಂಡು ವೃತ್ತಿಪರ ಕೌಶಲ್ಯದೊಂದಿಗೆ ಶ್ರದ್ಧೆ ಹಾಗೂ ಬದ್ಧತೆಯಿಂದ ದುಡಿದರೆ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯಾಯ ಮಾತನಾಡಿ, ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಗಳಿಸಲು ಮೊದಲ ಭೇಟಿಯಲ್ಲಿಯೇ ಉತ್ತಮ ಪ್ರಭಾವ ಬೀರುವುದು, ಹಿತ-ಮಿತವಾಗಿ ಮಾತನಾಡುವುದು ಹಾಗೂ ವಿನಯಶೀಲತೆ ಪ್ರದರ್ಶಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಸಹಾಯಕ ಗವರ್ನರ್ ಹೇಮಂತ್ ಯು. ಕಾಂತ್, ಕಲಾರಂಗವು ಸಮಾಜಮುಖಿಯಾಗಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವುದರ ಜೊತೆಗೆ ಇಂತಹ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸಿ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸುವ ಕಾರ್ಯ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯ್ಕ್ ಮಾತನಾಡಿ, ಜ್ಞಾನ, ಕೌಶಲ್ಯ ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಅನಿವಾರ್ಯವಾಗಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಬಿರದ ನಿರ್ದೇಶಕರಾದ ಹುಬ್ಬಳ್ಳಿಯ ಮೈ ಲೈಫ್ ಸಂಸ್ಥಾಪಕ ಪ್ರವೀಣ್ ವಿ. ಗುಡಿಯವರು ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿವಿಧ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಸುದರ್ಶನಮೂರ್ತಿ, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್, ಅನಂತರಾಜ್ ಉಪಾಧ್ಯಾಯ, ಉಮೇಶ ಭಟ್, ಆರ್. ವಸಂತ, ಎನ್. ರಾಮ ಭಟ್ ಹಾಗೂ ಎ. ನಾಗಭೂಷಣ ಭಟ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article