ಮಂಗಳೂರಿನಲ್ಲಿ ರಾಷ್ಟ್ರೀಯ ಭದ್ರತಾ ದಳದಿಂದ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆ
Thursday, July 23, 2026
ಮಂಗಳೂರು ನಗರದಾದ್ಯಂತ ಭದ್ರತಾ ಸನ್ನದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ರಾಷ್ಟ್ರೀಯ ಭದ್ರತಾ ದಳ (NSG) ವತಿಯಿಂದ ‘ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆ’ ಆರಂಭಿಸಲಾಗಿದೆ. ಈ ಕಾರ್ಯಾಚರಣೆ ಜುಲೈ 22ರಿಂದ ಆರಂಭಗೊಂಡಿದ್ದು, ಜುಲೈ 25ರವರೆಗೆ ನಡೆಯಲಿದೆ.
ಭದ್ರತಾ ವ್ಯವಸ್ಥೆಗಳ ಕಾರ್ಯಕ್ಷಮತೆ, ವಿವಿಧ ಇಲಾಖೆಗಳ ನಡುವಿನ ಸಮನ್ವಯ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕಾರ್ಯಾಚರಣೆಯ ಅವಧಿಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಯಿಂದ ತಪಾಸಣೆ, ಸಂಚಾರ ನಿಯಂತ್ರಣ ಸೇರಿದಂತೆ ವಿವಿಧ ಕ್ರಮಗಳು ನಡೆಯುವ ಸಾಧ್ಯತೆಯಿದೆ. ಸಾರ್ವಜನಿಕರು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನೆರವಾಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.