ದೇಶದಲ್ಲಿ ಅಶಾಂತಿ ಸೃಷ್ಟಿಸುವವರ ಪರ ಕಾಂಗ್ರೆಸ್ ಪ್ರತಿಭಟನೆ ನಾಚಿಕೆಗೇಡು: ದಿನೇಶ್ ಅಮೀನ್
ವಿದ್ಯಾರ್ಥಿಗಳ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾದವರ ಪರವಾಗಿ ಉಡುಪಿ ಕಾಂಗ್ರೆಸ್ ನಾಯಕರು ರಸ್ತೆ ತಡೆ ಪ್ರತಿಭಟನೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಮ್ಮ ನಾಯಕರನ್ನು ಮೆಚ್ಚಿಸಲು ವಿದ್ಯಾರ್ಥಿಗಳ ಮುಖವಾಡ ಧರಿಸಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಪ್ರಯತ್ನಗಳಿಗೆ ಬೆಂಬಲ ನೀಡಲಾಗುತ್ತಿದೆ. ಇಂತಹ ಬೆಳವಣಿಗೆಗಳನ್ನು ಜನರು ಗಮನಿಸುತ್ತಿದ್ದಾರೆ. ನೀಟ್ ಪರೀಕ್ಷೆಗೆ ಸಂಬಂಧಿಸಿದ ವಿಚಾರವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡು ಸಂಸತ್ ಭವನದತ್ತ ಮೆರವಣಿಗೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದವರ ವಿರುದ್ಧ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಇದನ್ನೇ ರಾಜಕೀಯವಾಗಿ ಬಳಸಿಕೊಂಡು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದಿದೆ. ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೇಂದ್ರಗಳಾಗಿವೆ ಎಂಬ ಆರೋಪಗಳನ್ನು ಮಾಡಿದ ದಿನೇಶ್ ಅಮೀನ್, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಾದ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಘಟನೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ಯಾವುದೇ ಪ್ರಶ್ನೆ ಮಾಡುತ್ತಿಲ್ಲ. ಅಧಿಕಾರಿಗಳ ಮೇಲೆ ಹಲ್ಲೆ, ಅಪರಾಧ ಪ್ರಕರಣಗಳ ಹೆಚ್ಚಳದಂತಹ ವಿಚಾರಗಳ ಬಗ್ಗೆ ಗಮನ ಹರಿಸದೆ ರಾಜಕೀಯ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ದೇಶದ ಭದ್ರತೆ ಮತ್ತು ಸ್ಥಿರತೆಯ ವಿಚಾರದಲ್ಲಿ ಸವಾಲು ಹಾಕುವ ಶಕ್ತಿಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇಂತಹ ಶಕ್ತಿಗಳೊಂದಿಗೆ ಕೈಜೋಡಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಜನತೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.