-->
 ಮೈಸೂರು ದಸರಾ 2026: ಗಜ ಪಯಣಕ್ಕೆ ಚಾಲನೆ

ಮೈಸೂರು ದಸರಾ 2026: ಗಜ ಪಯಣಕ್ಕೆ ಚಾಲನೆ


ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಭರದ ಸಿದ್ಧತೆಗಳು ಆರಂಭವಾಗಿದ್ದು, ದಸರಾ ಗಜಪಯಣಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ದಸರಾ ಗಜಪಡೆಗೆ ಚಾಲನೆ ನೀಡಿದರು.

ಬೆಳಗ್ಗೆ 10ರಿಂದ 10.28ರವರೆಗೆ ನಿಗದಿಯಾಗಿದ್ದ ಶುಭ ತುಲಾ ಲಗ್ನದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಆನೆಗಳಿಗೆ ಫಲತಾಂಬೂಲ ನೀಡಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಪೂಜಾ ಕಾರ್ಯಕ್ರಮದ ನಂತರ ದಸರಾ ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.

ದಸರಾ ಗಜಪಯಣದ ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಅಭಿಮನ್ಯು ಸೇರಿದಂತೆ ಒಟ್ಟು 9 ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಬಾರಿ ಗಜಪಯಣದ ವೇಳೆ ಸತತ ಆರು ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಜಂಬೂ ಸವಾರಿ ನೆರವೇರಿಸಿದ ಅಭಿಮನ್ಯು ಆನೆಗೆ ಅರಣ್ಯ ಇಲಾಖೆ ವತಿಯಿಂದ ವಿಶೇಷ ಬೀಳ್ಕೊಡುಗೆ ನೀಡಲಾಯಿತು. ಬಣ್ಣಬಣ್ಣದ ಚಿತ್ತಾರಗಳಿಂದ ಸಿಂಗಾರಗೊಂಡಿದ್ದ ಅಭಿಮನ್ಯುವನ್ನು ಶಂಖ, ಚಕ್ರ, ಗಂಡಭೇರುಂಡ ಹಾಗೂ ಹೂವಿನ ಬಳ್ಳಿಗಳ ಅಲಂಕಾರದೊಂದಿಗೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ದಾರಿಯುದ್ದಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಅಭಿಮನ್ಯುವಿನ ಮೇಲೆ ಹೂಮಳೆ ಸುರಿಸಿ ಗೌರವ ಸಲ್ಲಿಸಿದರು.

ಅರಣ್ಯ ಇಲಾಖೆಯ ಅಚ್ಚುಮೆಚ್ಚಿನ ಆನೆಯಾಗಿರುವ ಅಭಿಮನ್ಯುವಿಗೆ ವಿಶೇಷ ಬೀಳ್ಕೊಡುಗೆ ನೀಡಬೇಕೆಂದು ಸಾರ್ವಜನಿಕರಿಂದ ಒತ್ತಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಗಜಪಯಣದ ಸಂದರ್ಭದಲ್ಲಿ ಅಭಿಮನ್ಯುವಿಗೆ ಗೌರವಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಮೈಸೂರಿನತ್ತ ಪ್ರಯಾಣ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದಸರಾ ಆಚರಣೆಯ ಸಿದ್ಧತೆಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿವೆ.

Ads on article

Advertise in articles 1

advertising articles 2

Advertise under the article