ಮಲ್ಪೆಯ ಬೋಟ್‌ನಲ್ಲಿ ಕಾರ್ಮಿಕನ ಕೊಲೆ: ಆರೋಪಿ ಗೋವಿಂದ ಪೊಲೀಸ್ ವಶಕ್ಕೆ
ಮಲ್ಪೆಯ ಧಕ್ಕೆಯಲ್ಲಿ ಮೀನು ಕಾರ್ಮಿಕನನ್ನು ಕೊಲೆಗೈದ ಆರೋಪಿ ರಾಯಚೂರು ಮೂಲದ ಗೋವಿಂದ ರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆ ಪ್ರದೇಶದಲ್ಲಿ ಬೋಟ್‌ನಲ್ಲಿ ಆಗಸ್ಟ್ 24ರ ರಾತ್ರಿ ಗೋವಿಂದ ಹಾಗೂ ಅಭಿಷೇಕ್ ನಡುವೆ ಗಲಾಟೆ ನಡೆದಿದ್ದು, ಆಗಸ್ಟ್ 25ರ ಬೆಳಗಿನ ಜಾವ ಗೋವಿಂದ ಎಂಬಾತ ಅಭಿಷೇಕ್‌ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಮಾಹಿತಿ ಪಡೆದ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ (ಕಾ&ಸು) ಅನಿಲ್ ಕುಮಾರ್ ಡಿ. ಅವರು ಸಿಬ್ಬಂದಿಗಳಾದ ಹೆಚ್‌ಸಿ ಆದರ್ಶ ಹಾಗೂ ಪಿಸಿ ಕುಬೇರ ಅವರೊಂದಿಗೆ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಆರೋಪಿ ಗೋವಿಂದ ಹೈದರಾಬಾದ್ ಅಥವಾ ಮುಂಬೈ ಕಡೆಗೆ ರೈಲಿನಲ್ಲಿ ತೆರಳಲು ಉಡುಪಿ ರೈಲು ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದನೆಂಬ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.