-->
ಮುದರಂಗಡಿ ಡೇವಿಡ್ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಮುದರಂಗಡಿ ಡೇವಿಡ್ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು


ಆಗಸ್ಟ್ 7ರಂದು ನಡೆದ ಮುದರಂಗಡಿಯ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯ ಮೇಲೆ ಉಡುಪಿ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಸೋಮವಾರ ಹೆಬ್ರಿ ಸಮೀಪ ನಡೆದಿದೆ
.

ಡೇವಿಡ್ ಹತ್ಯೆಗೆ ಶೂಟರ್‌ಗಳನ್ನು ಕಳುಹಿಸಿಕೊಟ್ಟಿದ್ದ ಆರೋಪ ಎದುರಿಸುತ್ತಿರುವ ಅನೂಜ್ ಎಂಬಾತನನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ಯುತ್ತಿದ್ದ ವೇಳೆ, ಹೆಬ್ರಿ ಬಳಿ ಮೂತ್ರ ವಿಸರ್ಜನೆಗಾಗಿ ವಾಹನದಿಂದ ಕೆಳಗಿಳಿಸಲಾಗಿತ್ತು. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಆರೋಪಿ ಅನೂಜ್ ಯತ್ನಿಸಿದ್ದಾನೆ ಎನ್ನಲಾಗಿದೆ.

ಆರೋಪಿಯನ್ನು ಹಿಡಿಯಲು ಪೊಲೀಸರು ಪ್ರಯತ್ನಿಸಿದ ವೇಳೆ ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್‌ಐ ವಿನಯ್ ಕೊರ್ಲಹಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ನಂಜನಾಯಕ್ ಅವರು ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅನೂಜ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಹಾಗೂ ಶ್ಯಾಮ್ ಎಂಬ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಡೇವಿಡ್ ಹತ್ಯೆ ಪ್ರಕರಣದಲ್ಲಿ ಉಡುಪಿ ಪೊಲೀಸರು ನಡೆಸಿದ ಎರಡನೇ ಶೂಟೌಟ್ ಇದಾಗಿದೆ. ಪ್ರಕರಣದ ತನಿಖೆಯಲ್ಲಿ ಆರೋಪಿ ಅನೂಜ್ ಶೂಟರ್‌ಗಳನ್ನು ಒದಗಿಸಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು ಎನ್ನಲಾಗಿದೆ.

ಅನೂಜ್ ನಾಲ್ಕು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ತಿಳಿದುಬಂದಿದ್ದು, ಕೊಲೆ ಮಾಡಲು ಸುಪಾರಿ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article