ಉಡುಪಿ ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ದಾಸವಾಣಿ ಗಾಯನ: ವಿಶ್ವದಾಖಲೆಯತ್ತ ಸಂಗೀತ ಬಾಲಚಂದ್ರ
ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ವಿದುಷಿ ಸಂಗೀತ ಬಾಲಚಂದ್ರ ಅವರು ಸತತ 25 ಗಂಟೆಗಳ ಕಾಲ ಹರಿದಾಸರ ಪದಗಳು ಹಾಗೂ ಕೀರ್ತನೆಗಳನ್ನು ನಿರಂತರವಾಗಿ ಗಾಯನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಈ ಅಪೂರ್ವ ಸಂಗೀತ ಸಾಧನೆಗೆ ಭಗವದ್ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಚಾಲನೆ ನೀಡಲಾಯಿತು. ಇಂದು ಮುಂಜಾನೆಯ ಶುಭಮುಹೂರ್ತದಲ್ಲಿ ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದವ್ಯಾಸ ಪುರಾಣಿಕರು ಹಾಗೂ ಗೀತಾ ಪುರಾಣಿಕ ದಂಪತಿಗಳ ಪುತ್ರಿಯಾದ ವಿದುಷಿ ಸಂಗೀತ ಬಾಲಚಂದ್ರ ಅವರು ಬಾಲ್ಯದಿಂದಲೇ ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡು, ನಿರಂತರ ಅಭ್ಯಾಸ ಹಾಗೂ ಸಾಧನೆಯ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ತಮ್ಮ ಸುದೀರ್ಘ ಸಂಗೀತ ಸಾಧನೆಯನ್ನು ಶ್ರೀಕೃಷ್ಣನ ಪಾದಾರವಿಂದಗಳಿಗೆ ಸಮರ್ಪಿಸುವ ಭಕ್ತಿಭಾವದಿಂದ 25 ಗಂಟೆಗಳ ನಿರಂತರ ದಾಸವಾಣಿ ಗಾಯನವನ್ನು ಕೈಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಹೆಡ್ ಡಾ. ಮನೀಷ್ ವಿಶ್ನೋಯಿ ಹಾಗೂ ಗೋವಾ ರಾಜ್ಯದ ಜಿಎಸ್‌ಟಿ ಕಮಿಷನರ್ ವಿಠೋಬ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕರಾದ ಭೀಮಾ ಜುವೆಲರ್ಸ್‌ನ ರಾಘವೇಂದ್ರ ಭಟ್ ಅವರು ಭಾಗವಹಿಸಿದ್ದರು.
ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಕಲಾ ಕಾರ್ಯದರ್ಶಿ ಕೆ.ವಿ. ರಮಣ್ ಸೇರಿದಂತೆ ಅನೇಕ ಗಣ್ಯರು, ಸಂಗೀತಾಸಕ್ತರು ಹಾಗೂ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪ್ರಸ್ತುತ ಮುಂಬೈಯಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಡಿಯೋ ಸಂದೇಶದ ಮೂಲಕ ವಿದುಷಿ ಸಂಗೀತ ಬಾಲಚಂದ್ರ ಅವರ ಸಂಗೀತ ಸಾಧನೆಯನ್ನು ಅಭಿನಂದಿಸಿ ಆಶೀರ್ವದಿಸಿದರು. ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿರುವ ಈ ಸಂಗೀತ ಸೇವೆ ಸೋಮವಾರ ಮುಂಜಾನೆ ಸಮಾಪಣೆಗೊಳ್ಳಲಿದೆ.
ಶ್ರೀಮಠದ ಕಲಾ ಕಾರ್ಯದರ್ಶಿ ಕೆ.ವಿ. ರಮಣ್ ಅವರು ಪ್ರಸ್ತಾವನೆಗೈದು, ಕಾರ್ಯಕ್ರಮದ ಉದ್ದೇಶ ಹಾಗೂ ವಿದುಷಿ ಸಂಗೀತ ಬಾಲಚಂದ್ರ ಅವರ 25 ಗಂಟೆಗಳ ನಿರಂತರ ಸಂಗೀತ ಸಾಧನೆಯ ವೈಶಿಷ್ಟ್ಯವನ್ನು ವಿವರಿಸಿದರು.
ಈ ಸಂಗೀತ ಯಜ್ಞಕ್ಕೆ ಹಲವು ಪ್ರತಿಭಾವಂತ ವಾದ್ಯ ಕಲಾವಿದರು ಸಹಕಾರ ನೀಡುತ್ತಿದ್ದಾರೆ. ಕೀಬೋರ್ಡ್‌ನಲ್ಲಿ ಗುರುರಾಜ್, ಮೊಗಿ ಗುರುರಾಜ್ ಹಾಗೂ ರಜ್ಯಾ ಕರಿವೆಲ್ಲೂರ್, ರಿದಮ್ ಪ್ಯಾಡ್‌ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚಾ ಹಾಗೂ ದೀಪಕ್ ರಾಜ್ ಉಲ್ಲಾಸು ಮತ್ತು ಕೊಳಲು ವಾದನದಲ್ಲಿ ಸಂತೋಷ್ ವಿಟ್ಟಲ್ ಅವರು ಸಂಗೀತ ಸಹಕಾರ ನೀಡುತ್ತಿದ್ದಾರೆ.
ಭೀಮಾ ಜುವೆಲರ್ಸ್ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದೆ.
ಸತತ 25 ಗಂಟೆಗಳ ಕಾಲ ಹರಿದಾಸರ ಪದಗಳು ಮತ್ತು ಕೀರ್ತನೆಗಳನ್ನು ಗಾಯನ ಮಾಡುವ ಈ ಕಾರ್ಯಕ್ರಮವು ಕೇವಲ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನವಾಗಿರದೆ, ದಾಸಸಾಹಿತ್ಯ, ಕರ್ನಾಟಕ ಸಂಗೀತ, ಶ್ರೀಕೃಷ್ಣ ಭಕ್ತಿ ಹಾಗೂ ಕಲಾಸಾಧನೆಯ ಅಪೂರ್ವ ಸಂಗಮವಾಗಿದೆ.

