ಗಂಡಭೇರುಂಡ ಹೊತ್ತು ಮಿಸ್ ಯುನಿವರ್ಸ್ ವೇದಿಕೆಯಲ್ಲಿ ಹೆಜ್ಜೆ ಹಾಕಿದ ಕರಾವಳಿ ಕುವರಿ ಸ್ಫೂರ್ತಿ ಶೆಟ್ಟಿ
Thursday, August 20, 2026
ಸೌಂದರ್ಯ, ಆತ್ಮವಿಶ್ವಾಸ ಮತ್ತು ಕರ್ನಾಟಕದ ಸಂಸ್ಕೃತಿಯ ಸೊಬಗನ್ನು ವಿಶ್ವಮಟ್ಟದ ವೇದಿಕೆಯಲ್ಲಿ ಕರಾವಳಿಯ ಕುವರಿ ಸ್ಫೂರ್ತಿ ಶೆಟ್ಟಿ ಪರಿಚಯಿಸಿದ್ದಾರೆ. ಮಿಸ್ ಯುನಿವರ್ಸ್ ಇಂಡಿಯಾ 2026ರ ನ್ಯಾಷನಲ್ ಫೈನಲಿಸ್ಟ್ ಆಗಿ ಆಯ್ಕೆಯಾಗಿರುವ ಸ್ಫೂರ್ತಿ ಶೆಟ್ಟಿ, ಸ್ಪರ್ಧೆಯ ವಿಶೇಷ ಪ್ರದರ್ಶನದಲ್ಲಿ ಕರ್ನಾಟಕದ ಹೆಮ್ಮೆಯ ಲಾಂಛನ ಗಂಡಭೇರುಂಡವನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕರ್ನಾಟಕದ ಪರಂಪರೆ, ಶೌರ್ಯ ಮತ್ತು ವೈಭವವನ್ನು ಪ್ರತಿನಿಧಿಸುವ ಗಂಡಭೇರುಂಡವನ್ನು ತಮ್ಮ ಪ್ರಸ್ತುತಿಯ ಪ್ರಮುಖ ಅಂಶವನ್ನಾಗಿ ಮಾಡಿಕೊಂಡಿರುವ ಸ್ಫೂರ್ತಿ, ಕೇವಲ ಸೌಂದರ್ಯವಲ್ಲದೆ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ದೇಶದ ಮುಂದೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಉಡುಪಿಯ ಸ್ಫೂರ್ತಿ ಶೆಟ್ಟಿ ಮಿಸ್ ಯುನಿವರ್ಸ್ ಇಂಡಿಯಾ 2026ರ ಪಯಣದಲ್ಲಿ ಈಗಾಗಲೇ ಗಮನ ಸೆಳೆದಿದ್ದು, ವಿವಿಧ ಸಬ್‌ಕಾಂಟೆಸ್ಟ್‌ಗಳಲ್ಲೂ ಭಾಗವಹಿಸುತ್ತಿದ್ದಾರೆ. ‘Beauty with Brains’ ಮತ್ತು ಭಾಷಣ ಸುತ್ತಿನಲ್ಲೂ ಅವರ ಪ್ರಸ್ತುತಿ ಅಧಿಕೃತವಾಗಿ ಹಂಚಿಕೊಳ್ಳಲಾಗಿದೆ.
ಕರಾವಳಿಯ ಸಂಸ್ಕೃತಿ, ಕರ್ನಾಟಕದ ಹೆಮ್ಮೆ ಮತ್ತು ಆಧುನಿಕ ಆತ್ಮವಿಶ್ವಾಸವನ್ನು ಒಟ್ಟುಗೂಡಿಸಿಕೊಂಡು ಸ್ಫೂರ್ತಿ ಶೆಟ್ಟಿ ಮಿಸ್ ಯುನಿವರ್ಸ್ ಇಂಡಿಯಾ ವೇದಿಕೆಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಗಂಡಭೇರುಂಡದ ಪ್ರತಿರೂಪದ ಮೂಲಕ ಕರ್ನಾಟಕದ ಶಕ್ತಿ ಮತ್ತು ಪರಂಪರೆಯನ್ನು ಪ್ರತಿನಿಧಿಸಿರುವುದು ಅವರ ಈ ಪಯಣಕ್ಕೆ ಮತ್ತಷ್ಟು ವಿಶೇಷತೆ ತಂದಿದೆ.
