ಕಟಪಾಡಿಯಲ್ಲಿ ಡಿವೈಡರ್ ಮೇಲೇರಿದ ಖಾಸಗಿ ಬಸ್; ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತ
Monday, August 17, 2026
ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಎಕ್ಸ್‌ಪ್ರೆಸ್ ಬಸ್‌ವೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿವೈಡರ್ ಮೇಲೇರಿ ಸಿಲುಕಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ಕಟಪಾಡಿ ಸಮೀಪ ನಡೆದಿದೆ.
ಬಸ್ ಡಿವೈಡರ್ ಮೇಲೆ ಸಿಲುಕಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ನಾಗರಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಸಂಚಾರ ದಟ್ಟಣೆ ಮತ್ತಷ್ಟು ತೀವ್ರಗೊಂಡಿತು.
ನಾಗರಪಂಚಮಿ ಹಿನ್ನೆಲೆಯಲ್ಲಿ ನಾಗಬನ ಹಾಗೂ ಮೂಲಸ್ಥಾನಗಳಿಗೆ ತೆರಳುತ್ತಿದ್ದ ಭಕ್ತರು ಸೇರಿದಂತೆ ಸಾರ್ವಜನಿಕರು ಸಂಚಾರ ದಟ್ಟಣೆಯಿಂದ ಪರದಾಡುವಂತಾಯಿತು. ಹೆದ್ದಾರಿಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರು ಸಾಕಷ್ಟು ಸಮಯ ರಸ್ತೆಯಲ್ಲೇ ಕಳೆಯಬೇಕಾಯಿತು.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಡಿವೈಡರ್ ಮೇಲೇರಿದ್ದ ಬಸ್ ತೆರವುಗೊಳಿಸುವ ಕಾರ್ಯಾಚರಣೆಯ ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಪೊಲೀಸರು ಮುಂದಾದರು.