ಕೋಟೇಶ್ವರ ಕಡಲ ಕಿನಾರೆಯಲ್ಲಿ ಗಮನ ಸೆಳೆದ ‘ನಾಗಬನ’ ಮರಳು ಶಿಲ್ಪ
Monday, August 17, 2026
ನಾಡಿನೆಲ್ಲೆಡೆ ನಾಗರಪಂಚಮಿಯ ದಿನವಾದ ಇಂದು ಕರಾವಳಿಯ ಪ್ರಕೃತಿ ಆರಾಧನೆ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ವಿಶಿಷ್ಟ ‘ನಾಗಬನ’ ಮರಳು ಶಿಲ್ಪಾಕೃತಿ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಗಮನ ಸೆಳೆಯಿತು.
ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸಸ್‌ನ ಕಲಾವಿದ್ಯಾರ್ಥಿಗಳು ‘Save Nature’ ಎಂಬ ಸಂದೇಶದೊಂದಿಗೆ ಈ ಮರಳು ಶಿಲ್ಪವನ್ನು ರೂಪಿಸಿದ್ದಾರೆ. ಕರಾವಳಿ ಭಾಗದಲ್ಲಿ ಭಯ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾಗಿ ಆರಾಧಿಸಲ್ಪಡುವ ಪ್ರಕೃತಿ ನಾಗದೇವರ ಪರಿಕಲ್ಪನೆಯನ್ನು ಆಧರಿಸಿ ‘ನಾಗಬನ’ ಎಂಬ ಶೀರ್ಷಿಕೆಯಡಿ ಕಲಾಕೃತಿಯನ್ನು ನಿರ್ಮಿಸಲಾಗಿದೆ.
ಸುಮಾರು 12 ಅಡಿ ಅಗಲದ ವಿಸ್ತೀರ್ಣದಲ್ಲಿ ರೂಪುಗೊಂಡಿರುವ ಈ ಶಿಲ್ಪವು ಪ್ರಕೃತಿ, ನಾಗಾರಾಧನೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವಂತಿದೆ. ಕಡಲ ಕಿನಾರೆಯಲ್ಲಿ ಮೂಡಿಬಂದಿರುವ ಕಲಾಕೃತಿಯನ್ನು ಸ್ಥಳೀಯರು ಹಾಗೂ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದರು.
ಕಲಾವಿದ್ಯಾರ್ಥಿಗಳಾದ ಅದ್ವಿತ್ ಶಂಕರ್, ಸಾತ್ವಿಕ್ ಕೆ.ಆರ್., ಪ್ರಣತಿ ಪ್ರಶಾಂತ್ ಭಟ್, ಸಮನ್ವಿ, ಅದ್ವಿತ್ ಕುಮಾರ್ ಆರ್., ಸುನೇರಿ ಹೆಗ್ಡೆ ಹಾಗೂ ವಿದ್ಯಾ ರಾಣಿ ಅವರು ಕಲಾಕೃತಿ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಅವರ ತರಬೇತಿ ಹಾಗೂ ಮಾರ್ಗದರ್ಶನದಲ್ಲಿ ಶಿಲ್ಪ ಮೂಡಿಬಂದಿದೆ.
ಪ್ರಕೃತಿಯೊಂದಿಗೆ ಮನುಷ್ಯನ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುವ ಈ ‘ನಾಗಬನ’ ಕಲಾಕೃತಿ, “ಪ್ರಕೃತಿಯನ್ನು ಉಳಿಸಿ, ಪರಿಸರವನ್ನು ಸಂರಕ್ಷಿಸಿ” ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುತ್ತಿದೆ.