ಚಾಮರಾಜನಗರ ಎನ್ಕೌಂಟರ್ ಪ್ರಕರಣ: ಸ್ವತಂತ್ರ ನ್ಯಾಯಾಂಗ ತನಿಖೆಗೆ ರುಡಾಲ್ಫ್ ಡಿಸೋಜಾ ಆಗ್ರಹ
ಚಾಮರಾಜನಗರದಲ್ಲಿ ನಡೆದಿರುವ ಎನ್ಕೌಂಟರ್ ಘಟನೆ ಅತ್ಯಂತ ಗಂಭೀರ ಹಾಗೂ ಖಂಡನೀಯವಾಗಿದ್ದು, ಪ್ರಕರಣದ ಕುರಿತು ತಕ್ಷಣ ಸ್ವತಂತ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ನಕಲಿ ಎನ್ಕೌಂಟರ್ ಮೂಲಕ ಕ್ರೈಸ್ತರ ಮಾರಣಹೋಮ ಮಾಡಲಾಗಿದೆ” ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈ ಆರೋಪಗಳಿಗೆ ತಕ್ಷಣ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣವನ್ನು ಇಲಾಖೆಯ ಆಂತರಿಕ ತನಿಖೆಗೆ ಸೀಮಿತಗೊಳಿಸದೆ, ಕರ್ನಾಟಕ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಎನ್ಕೌಂಟರ್‌ನಲ್ಲಿ ನೇರವಾಗಿ ಭಾಗಿಯಾಗಿರುವವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಘಟನೆಯ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಅರಣ್ಯ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ರುಡಾಲ್ಫ್ ಡಿಸೋಜಾ ಆಗ್ರಹಿಸಿದ್ದಾರೆ.
“ತನಿಖೆಯ ಹೆಸರಿನಲ್ಲಿ ಕಣ್ಣೊರೆಸುವ ನಾಟಕ ನಡೆಯಬಾರದು. ಸತ್ಯವನ್ನು ಮುಚ್ಚಿಡುವ ಪ್ರಯತ್ನವಾಗಲಿ, ತಪ್ಪಿತಸ್ಥರನ್ನು ರಕ್ಷಿಸುವ ರಾಜಕೀಯವಾಗಲಿ ನಡೆಯಬಾರದು. ಜನರ ಜೀವದೊಂದಿಗೆ ಚೆಲ್ಲಾಟವಾಡುವ ನಿರಂಕುಶ ಆಡಳಿತವನ್ನು ಸಹಿಸಲು ಸಾಧ್ಯವಿಲ್ಲ. ನಮಗೆ ಸತ್ಯ, ನ್ಯಾಯ ಮತ್ತು ಹೊಣೆಗಾರಿಕೆ ಬೇಕು. ಅರಣ್ಯ ಸಚಿವರ ರಾಜೀನಾಮೆಯೂ ಬೇಕು,” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಕ್ರೈಸ್ತ ಸಮುದಾಯದ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಕ್ರೈಸ್ತ ಅಭಿವೃದ್ಧಿ ನಿಗಮದ ಸದಸ್ಯ ಪ್ರಶಾಂತ್ ಜತ್ತನ್ನ ಅವರು, ಕ್ರೈಸ್ತ ವ್ಯಕ್ತಿಗಳ ನರಮೇಧ ನಡೆದಿದೆ ಎಂಬ ಆರೋಪಗಳ ನಡುವೆಯೂ ಘಟನೆ ಕುರಿತು ಖಂಡನೆ ವ್ಯಕ್ತಪಡಿಸದೆ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ರುಡಾಲ್ಫ್ ಡಿಸೋಜಾ ಟೀಕಿಸಿದ್ದಾರೆ.
ಸರ್ಕಾರವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ತಕ್ಷಣ ಕೊಲೆ ಪ್ರಕರಣ ದಾಖಲಿಸಿ, ಸ್ವತಂತ್ರ ನ್ಯಾಯಾಂಗ ಅಥವಾ ಸಿಬಿಐ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.