3 ಗಂಟೆಗಳ ಕಾಲ ಪಡುಬಿದ್ರಿ ಸಮುದ್ರದಲ್ಲಿ ಈಜುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯ ರಕ್ಷಣೆ
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮಧ್ಯಾಹ್ನ ಸಮುದ್ರಕ್ಕಿಳಿದು ಸತತ ಮೂರು ಗಂಟೆಗಳ ಕಾಲ ಈಜುತ್ತಿದ್ದ ವೇಳೆ ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಸಮುದ್ರಕ್ಕಿಳಿದು ಮನವೊಲಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದ ಘಟನೆ ಭಾನುವಾರ ಪಡುಬಿದ್ರಿ ಕಡಲತೀರದಲ್ಲಿ ನಡೆದಿದೆ.
ಕಾಡಿಪಟ್ಟ ನಿವಾಸಿ ಯತೀಶ್ (38) ರಕ್ಷಿಸಲ್ಪಟ್ಟ ವ್ಯಕ್ತಿ. ಯತೀಶ್ ಈ ಹಿಂದೆ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಲೈಫ್‌ಗಾರ್ಡ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆಯೂ ಒಂದೆರಡು ಬಾರಿ ಇದೇ ರೀತಿಯಾಗಿ ಸಮುದ್ರಕ್ಕೆ ತೆರಳಿದ್ದ ಅವರನ್ನು ಸ್ಥಳೀಯರು ರಕ್ಷಿಸಿ ದಡಕ್ಕೆ ಕರೆತಂದಿದ್ದರು ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ ಜನರು ನೋಡುತ್ತಿದ್ದಂತೆಯೇ ಯತೀಶ್ ಸಮುದ್ರಕ್ಕೆ ಇಳಿದು ಈಜತೊಡಗಿದ್ದರು. ಈ ವೇಳೆ ಕಾಪುವಿನ ಭೈರವಿ ದೋಣಿಯಲ್ಲಿ ಆಗಮಿಸಿದ ಮೀನುಗಾರರು ಅವರನ್ನು ದೋಣಿಗೆ ಕರೆತರಲು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.
ವಿಷಯ ತಿಳಿದ ಪಡುಬಿದ್ರಿಯ ಸದಾಶಿವ ಅವರು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು ಸಮಾಜ ಸೇವಕ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿ ಸಮುದ್ರಕ್ಕೆ ತೆರಳಿ ಯತೀಶ್ ಅವರನ್ನು ರಕ್ಷಿಸುವಂತೆ ಮನವಿ ಮಾಡಿದರು.
ಮಧ್ಯಾಹ್ನ 2.15ರ ಸುಮಾರಿಗೆ ಪಡುಬಿದ್ರಿ ಕಡಲತೀರಕ್ಕೆ ಆಗಮಿಸಿದ ಈಶ್ವರ್ ಮಲ್ಪೆ, ಸಮುದ್ರಕ್ಕಿಳಿದು ಸುಮಾರು ಮೂರು ಮೈಲು ದೂರದವರೆಗೆ ಈಜಿ ತೆರಳಿ ಮಾನವೀಯ ಮಾತುಗಳ ಮೂಲಕ ಯತೀಶ್ ಅವರನ್ನು ಮನವೊಲಿಸಿದರು. ಬಳಿಕ ಅವರೊಂದಿಗೆ ಈಜುತ್ತಲೇ ಸುಮಾರು 3.15ರ ವೇಳೆಗೆ ಸುರಕ್ಷಿತವಾಗಿ ದಡ ಸೇರಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಈಜುಪಟುಗಳು ಹಾಗೂ ಬ್ಲೂ ಫ್ಲ್ಯಾಗ್ ಬೀಚ್‌ನ ಲೈಫ್‌ಗಾರ್ಡ್‌ಗಳಾದ ಪ್ರಜ್ವಲ್, ಸುಶಾಂತ್ ಮತ್ತು ಬಾದಲ್ ಸಹಕರಿಸಿದರು. ರಕ್ಷಿಸಲ್ಪಟ್ಟ ಯತೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.