ಆಸ್ಪತ್ರೆಗೆ ದಾಖಲಿಸುವ ವೇಳೆ ಅಂಬ್ಯುಲೆನ್ಸ್ ಗಾಜು ಪುಡಿಗೈದ ಮನೋರೋಗಿ
Tuesday, August 18, 2026
ಜಿಲ್ಲಾಸ್ಪತ್ರೆಗೆ ಮನೋರೋಗಿಯನ್ನು ದಾಖಲಿಸಲು ಕರೆದೊಯ್ಯುತ್ತಿದ್ದ ವೇಳೆ ್ಅಂಬುಲೆನ್ಸ್ ವಾಹನದ ಹಿಂಬದಿ ಬಾಗಿಲಿನ ಗಾಜನ್ನು ಪುಡಿಗೈದು, ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಪೊಲೀಸರ ಮೇಲೂ ಹಲ್ಲೆಗೆ ಮುಂದಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಆದಿಉಡುಪಿ ಹಾಗೂ ಪಂದುಬೆಟ್ಟು ಪರಿಸರದಲ್ಲಿ ಮನೋರೋಗಿಯೊಬ್ಬರು ಮನೆಗಳಿಗೆ ನುಗ್ಗುವುದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಿಪಡಿಸುವುದು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದರು. ಇದರಿಂದ ಭೀತಿಗೊಳಗಾದ ಸ್ಥಳೀಯರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ಒಳಕಾಡು ಅವರು ನಾಗರಿಕ ಸಮಿತಿಯ ಉಚಿತ ಸೇವಾ ವಾಹನದ ಮೂಲಕ ಮನೋರೋಗಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಅಂಬುಲೆನ್ಸ್‌ನಿಂದ ಜಿಗಿದು ರೋಗಿ ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲದೆ, ವಾಹನದ ಹಿಂಬದಿ ಬಾಗಿಲಿನ ಗಾಜನ್ನು ಪುಡಿಗೈದು, ಒಳಕಾಡು ಹಾಗೂ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ನಿತ್ಯಾನಂದ ಒಳಕಾಡು ಅವರು ಪರಾರಿಯಾಗುತ್ತಿದ್ದ ಮನೋರೋಗಿಯನ್ನು ಮತ್ತೊಮ್ಮೆ ವಶಕ್ಕೆ ಪಡೆದುಕೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಗೆ 112 ತುರ್ತು ಸಹಾಯವಾಣಿ ಪೊಲೀಸರು ನೆರವು ನೀಡಿದರು.
