-->
 ಜಾಗದ ಗಡಿ ವಿವಾದ: ಗಂಗೊಳ್ಳಿ ಠಾಣೆಯಲ್ಲಿ ದೂರು- ಪ್ರತೀದೂರು ದಾಖಲು

ಜಾಗದ ಗಡಿ ವಿವಾದ: ಗಂಗೊಳ್ಳಿ ಠಾಣೆಯಲ್ಲಿ ದೂರು- ಪ್ರತೀದೂರು ದಾಖಲು



ಆಲೂರಿನಲ್ಲಿ ಜಾಗದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ, ಹಲ್ಲೆ ನಡೆದು ಗಂಗೊಳ್ಳಿ ಠಾಣೆಯಲ್ಲಿ ದೂರು ಪ್ರತೀದೂರು ದಾಖಲಾಗಿದೆ. 

ಆಲೂರು ಗ್ರಾಮದ ಸರೋಜ (48) ಹಾಗೂ ನೆರೆಮನೆಯ ವಸಂತ ಶೆಟ್ಟಿ (70) ಅವರ ನಡುವೆ ಜಾಗದ ವಿಚಾರವಾಗಿ ಹಲವು ದಿನಗಳಿಂದ ವಿವಾದವಿದ್ದು, ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.

ಸರೋಜ ನೀಡಿದ ದೂರಿನ ಪ್ರಕಾರ, ಆ.16ರಂದು ಮಧ್ಯಾಹ್ನ 1.30ರ ಸುಮಾರಿಗೆ ಅವರು ತಮ್ಮ ಅಕ್ಕ ಮುಕಾಂಬು ಅವರ ಮನೆಯ ಹೊರಗಡೆ ಇದ್ದಾಗ ವಸಂತ ಶೆಟ್ಟಿ ಹಾಗೂ ಅವರ ಪುತ್ರ ಅಕ್ಷಯ ಶೆಟ್ಟಿ ಅಲ್ಲಿಗೆ ಬಂದು ಜಾಗ ಮತ್ತು ಮನೆ ತಮ್ಮದೆಂದು ಹೇಳಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಅಕ್ಷಯ ಶೆಟ್ಟಿ ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಸರೋಜ ಆರೋಪಿಸಿದ್ದಾರೆ.

ಅಲ್ಲದೆ, ಅಕ್ಷಯ ಶೆಟ್ಟಿ ಗದ್ದೆಯ ಬಳಿಗೆ ತೆರಳಿ ಕತ್ತಿಯಿಂದ ಮರದ ಬೇಲಿಯನ್ನು ಕಡಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಸರೋಜ ಹಾಗೂ ಮುಕಾಂಬು ಅವರನ್ನು ವಸಂತ ಶೆಟ್ಟಿ ಅವಾಚ್ಯವಾಗಿ ನಿಂದಿಸಿ, ಸಾಗುವಳಿ ಮಾಡಿದ್ದ ಗದ್ದೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಅಕ್ಷಯ ಶೆಟ್ಟಿ ಹಾರೆಯಿಂದ ಮುಖಕ್ಕೆ ಹೊಡೆಯಲು ಮುಂದಾದಾಗ, ಏಟು ಬಲಗೈ ಬೆರಳಿಗೆ ತಾಗಿ ರಕ್ತಗಾಯವಾಗಿದೆ ಎಂದು ಸರೋಜ ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತ ವಸಂತ ಶೆಟ್ಟಿ ನೀಡಿದ ದೂರಿನ ಪ್ರಕಾರ, ಅವರು ಸರ್ವೇ ನಂಬರ್ 26/5ರ 28 ಸೆಂಟ್ಸ್ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದು, ಹಳೆಯ ಬೇಲಿಯನ್ನು ಸರಿಪಡಿಸುವ ಸಲುವಾಗಿ ಪುತ್ರ ಅಕ್ಷಯ ಶೆಟ್ಟಿ ಜತೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸರೋಜ ಹಾಗೂ ಮುಕಾಂಬು ಬೇಲಿ ಸರಿಪಡಿಸುವುದನ್ನು ತಡೆದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೈಯಲ್ಲಿದ್ದ ಹಾರೆ ಹಾಗೂ ಕತ್ತಿಯನ್ನು ಕಸಿದುಕೊಳ್ಳಲು ಮುಂದಾಗಿದ್ದಲ್ಲದೆ, ಸರೋಜ ಮರದ ಕೋಲಿನಿಂದ ತಮ್ಮ ತಲೆಗೆ ಹೊಡೆದು ಬೆದರಿಕೆ ಹಾಕಿದ್ದಾರೆ ಎಂದು ವಸಂತ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಅಕ್ಷಯ ಶೆಟ್ಟಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ದೂರಿನ ಆಧಾರದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಜಾಗದ ಗಡಿ ವಿವಾದಕ್ಕೆ ಸಂಬಂಧಿಸಿದ ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Ads on article

Advertise in articles 1

advertising articles 2

Advertise under the article