ಉಡುಪಿ: ಸಿಪಿಐ ಉಡುಪಿ ತಾಲೂಕು ಸಮಿತಿಯಿಂದ ಪ್ರತಿಭಟನಾ ಜಾಥಾ
Tuesday, August 18, 2026
ರೈತರ ಬೆಳೆಗಳಿಗೆ ಖಚಿತ ಖರೀದಿ ವ್ಯವಸ್ಥೆ ಜಾರಿಗೊಳಿಸುವುದು, ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ತಡೆಯುವುದು, ಕಟ್ಟಡ ಕಾರ್ಮಿಕರ ಪಿಂಚಣಿ ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಪರಿಷ್ಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ ಉಡುಪಿ ತಾಲೂಕು ಸಮಿತಿ ವತಿಯಿಂದ ಉಡುಪಿ ನಗರದಲ್ಲಿ ಪ್ರತಿಭಟನಾ ಜಾಥಾ ನಡೆಯಿತು.
ಉಡುಪಿಯ ಚಿತ್ತರಂಜನ್ ಸರ್ಕಲ್‌ನಿಂದ ಆರಂಭಗೊಂಡ ಜಾಥಾವು ಅಲಂಕಾರ್, ಡಯಾನ,, ಅಂಚೆ ಕಚೇರಿ, ಕಲ್ಪನಾ ಥಿಯೇಟರ್, ಮೆಸ್ಕಾಂ ಕಛೇರಿ ಮುಂತಾದ ಪ್ರದೇಶಗಳಲ್ಲಿ ಸಾಗಿ ಮತ್ತೆ ಚಿತ್ತರಂಜನ್ ಸರ್ಕಲ್‌ನಲ್ಲಿ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ , ಬೆಲೆ ಏರಿಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣಗೊಳ್ಳುತ್ತಿದ್ದು, ಕಟ್ಟಡ ಕಾರ್ಮಿಕರು ಹಾಗೂ ಬೀಡಿ ಕಾರ್ಮಿಕರಿಗೆ ಸಮರ್ಪಕ ವೇತನ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಳೆಗಳಿಗೆ ಖಚಿತ ಖರೀದಿ ವ್ಯವಸ್ಥೆ ಜಾರಿಗೊಳಿಸುವುದು, ರೈತರ ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ ನೀಡುವುದು, ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನಿಲ್ಲಿಸುವುದು, ಕಟ್ಟಡ ಕಾರ್ಮಿಕರ ಪಿಂಚಣಿ ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪರಿಷ್ಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇದೇ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 1ರಂದು ‘ದೆಹಲಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೀತಾರಾಮ್ ಬೇರಿಂಜೆ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ , ಶಿವಾನಂದ್ ಸೇರಿದಂತೆ ಸಿಪಿಐ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

.jpeg)