ವೃದ್ಧೆಯ ಕೈಯಿಂದ ಚಿನ್ನದ ಬಳೆ ಎಳೆದೊಯ್ದ ಪ್ರಕರಣ: ಮೊಮ್ಮಗನ ಬಂಧನ
ಪುಂಜಾಲಕಟ್ಟೆ ತೆಂಕಕಜೆಕಾರು ಉದ್ದದ ಗುಡ್ಡೆಯಲ್ಲಿ ವೃದ್ಧೆಯೊಬ್ಬರಿಂದ ಬಲವಂತವಾಗಿ ಚಿನ್ನದ ಬಳೆಗಳನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸರು ಆರೋಪಿಯನ್ನು ಬಂಧಿಸಿ, ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ವೃದ್ದೆಯ ಮೊಮ್ಮಗ, ಬಂಟ್ವಾಳ ತೆಂಕಕಜೇಕಾರು ನಿವಾಸಿ ಶಬೀರ್ (33) ಎಂದು ಗುರುತಿಸಲಾಗಿದೆ.
ಆ.14ರಂದು ಸಾದಿಕ್ ಎಂಬವರ ತಾಯಿ ಅವ್ವಮ್ಮ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮುಖಚಹರೆ ಕಾಣದಂತೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಅವ್ವಮ್ಮ ಅವರ ಎರಡೂ ಕೈಗಳಲ್ಲಿದ್ದ ಸುಮಾರು 40 ಗ್ರಾಂ ತೂಕದ, ಅಂದಾಜು ₹5 ಲಕ್ಷ ಮೌಲ್ಯದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದೊಯ್ದಿದ್ದಾನೆ. ಈ ವೇಳೆ ಅವ್ವಮ್ಮ ಅವರ ಕೈಗೆ ರಕ್ತಗಾಯವಾಗಿತ್ತು.
ಘಟನೆ ಕುರಿತು ಸಾದಿಕ್ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ನಡೆಸಿದ ಪೊಲೀಸರು ಆ.16ರಂದು ಪ್ರಕರಣದ ಆರೋಪಿತ ಶಬೀರ್‌ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣಾ ಪಿಎಸ್ಐ ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.