-->
 ಯಕ್ಷಗಾನ ರಂಗಕ್ಕೆ ಗಡಿನಾಡ ಕನ್ನಡಿಗರ ಕೊಡುಗೆ ಅಪಾರ: ಡಾ. ತಲ್ಲೂರು ಶಿವರಾಮ ಶೆಟ್ಟಿ

ಯಕ್ಷಗಾನ ರಂಗಕ್ಕೆ ಗಡಿನಾಡ ಕನ್ನಡಿಗರ ಕೊಡುಗೆ ಅಪಾರ: ಡಾ. ತಲ್ಲೂರು ಶಿವರಾಮ ಶೆಟ್ಟಿ


ಕವಿ ಪಾರ್ತಿಸುಬ್ಬ ಅವರ ತವರೂರಾದ ಗಡಿನಾಡಿನ ಶ್ರೇಷ್ಠ ಯಕ್ಷಗಾನ ಕಲಾವಿದರು ಹಾಗೂ ಸಂಸ್ಥೆಗಳು ಯಕ್ಷಗಾನ ಕಲೆಗೆ ನೀಡಿರುವ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕಡಂಬಾರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ 36ನೇ ವರ್ಷದ ತಾಳಮದ್ದಳೆ ಕೂಟ ‘ಗಡಿನಾಡ ಯಕ್ಷ ಸಂಭ್ರಮ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಕಲೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಅಕಾಡೆಮಿ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ಯಕ್ಷಗಾನದ ಸಂಸ್ಕೃತಿ ಮತ್ತು ಹಿರಿಮೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಮಕ್ಕಳಿಗೆ ಯಕ್ಷಗಾನ ಕಲಿಸುವ ಅಗತ್ಯವಿದೆ. ಈಗಾಗಲೇ ಉಡುಪಿ ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷ ಶಿಕ್ಷಣ ಪಡೆಯುತ್ತಿದ್ದು, ಈ ಮಾದರಿ ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಹೇಳಿದರು.

ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನ ಪ್ರಕಾರಗಳಿಗೆ ನಿರಂತರ ಪ್ರೋತ್ಸಾಹ ದೊರೆಯುತ್ತಿದೆ. ಶಿಕ್ಷಕರು, ವೈದ್ಯರು, ಇಂಜಿನಿಯರ್‌ಗಳು ಸೇರಿದಂತೆ ಹಲವು ಸುಶಿಕ್ಷಿತರು ಯಕ್ಷಗಾನ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಮೂಡಲಪಾಯ ಯಕ್ಷಗಾನ ಪ್ರಕಾರವು ಸೂಕ್ತ ಪ್ರೋತ್ಸಾಹದ ಕೊರತೆಯಿಂದ ಸೊರಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಇಂದು ವೈಭವದ ಪರಾಕಾಷ್ಠೆ ತಲುಪಲು ಹಿರಿಯ ಕಲಾವಿದರ ನಿಸ್ವಾರ್ಥ ಕಲಾ ಸೇವೆಯೇ ಪ್ರಮುಖ ಕಾರಣವಾಗಿದೆ ಎಂದರು.

ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ಧಾರ್ಮಿಕ ಹಾಗೂ ನೈತಿಕ ಪ್ರಜ್ಞೆ ಬೆಳೆದು, ಗುರು-ಹಿರಿಯರಿಗೆ ಗೌರವ ನೀಡುವ ಮನೋಭಾವ ಮೂಡುತ್ತದೆ. ಯಕ್ಷಗಾನ ಕಲಿಕೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ಪೂರಕವಾಗಿದೆ ಎಂಬುದಕ್ಕೆ ಇತ್ತೀಚಿನ ಶೈಕ್ಷಣಿಕ ಫಲಿತಾಂಶಗಳು ಸಾಕ್ಷಿಯಾಗಿವೆ ಎಂದು ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷದ್ ವರ್ಕಾಡಿ ಮಾತನಾಡಿ, ಗಡಿನಾಡು ಪ್ರದೇಶವಾಗಿದ್ದರೂ ಕಾಸರಗೋಡಿನ ಕಲಾಪ್ರೇಮಿಗಳು ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುತ್ತಿದ್ದಾರೆ. ಈ ಮಣ್ಣಿನಲ್ಲಿ ಅನೇಕ ಶ್ರೇಷ್ಠ ಯಕ್ಷಗಾನ ಕಲಾವಿದರು ಹುಟ್ಟಿಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಸೂರ್ಯನಾರಾಯಣ ಅಯ್ಯ, ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ರಾವ್, ಯಕ್ಷಗಾನ ಅಕಾಡೆಮಿ ಸದಸ್ಯರಾದ ರಾಘವ ಎಚ್  ಶುಭ ಹಾರೈಸಿದರು. ಅಕಾಡೆಮಿ ಸದಸ್ಯರಾದ ಗುರುರಾಜ ಭಟ್, ರಾಜೇಶ್ ಕುಳಾಯಿ, ಸುಧಾಕರ ಶೆಟ್ಟಿ ಉಳ್ಳಾಲ, ವಿನಯ ಕುಮಾರ್ ಶೆಟ್ಟಿ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರನ್ನು ಗೌರವಿಸಲಾಯಿತು. ಹಿಮ್ಮೇಳ ಕಲಾವಿದ ಕೇಶವ ಆಚಾರ್ಯ ಕಿನ್ಯ ಅವರಿಗೆ ಯಕ್ಷ ಬಳಗದ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಲಾವಿದ ಹರಿಶ್ಚಂದ್ರ ನಾಯಕ್ ಅಭಿನಂದನಾ ನುಡಿಗಳನ್ನಾಡಿದರು. ಅಕಾಡೆಮಿ ಸದಸ್ಯ ಸಂಚಾಲಕ ಸತೀಶ್ ಅಡಪ ಸಂಕಬೈಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಾಗರಾಜ ಪದಕಣ್ಣಾಯ ವಂದಿಸಿದರು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನದ ಸಹಕಾರದಲ್ಲಿ ಯಕ್ಷ ಬಳಗ ಹೊಸಂಗಡಿ ಮಂಜೇಶ್ವರ ಆಯೋಜಿಸಿತ್ತು.

Ads on article

Advertise in articles 1

advertising articles 2

Advertise under the article