-->
 ಹೊಂಡ ಗುಂಡಿ ರಸ್ತೆ, ಚರಂಡಿ ಅವ್ಯವಸ್ಥೆ; ಮಿಷನ್ ಆಸ್ಪತ್ರೆ–ಚಿಟ್ಪಾಡಿ ರಸ್ತೆಯಲ್ಲಿ ಸಂಚಾರ ದುಸ್ತರ

ಹೊಂಡ ಗುಂಡಿ ರಸ್ತೆ, ಚರಂಡಿ ಅವ್ಯವಸ್ಥೆ; ಮಿಷನ್ ಆಸ್ಪತ್ರೆ–ಚಿಟ್ಪಾಡಿ ರಸ್ತೆಯಲ್ಲಿ ಸಂಚಾರ ದುಸ್ತರ


ಉಡುಪಿ ನಗರದ ಮಿಷನ್ ಆಸ್ಪತ್ರೆಯಿಂದ ಚಿಟ್ಪಾಡಿ ಸಾಗುವ ರಸ್ತೆಯು ಭಾರೀ ಗುಂಡಿಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಪ್ರತಿದಿನ ಸಂಕಷ್ಟ ಎದುರಾಗಿದೆ. ಮಳೆಗಾಲ ಆರಂಭವಾದ ಬಳಿಕ ರಸ್ತೆಯುದ್ದಕ್ಕೂ ನೀರು ನಿಂತು ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರವೇ ದುಸ್ತರವೆನಿಸಿದೆ.


ಈ ರಸ್ತೆಯು ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರತಿದಿನ ನೂರಾರು ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸುತ್ತಾರೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಹದಗೆಟ್ಟ ಈ ರಸ್ತೆಯ ದುರಸ್ಥಿ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣಗೊಂಡಿತ್ತು. ಕಳಪೆ ಕಾಮಗಾರಿಯಿಂದಾದ ಈ ದುಸ್ಥಿತಿಗೆ ಇನ್ನೂ ಕೂಡಾ ಪರಿಹಾರ ಸಿಕ್ಕಿಲ್ಲ. ರಸ್ತೆ ಹಾಳಾಗಿರುವುದರಿಂದ ವಾಹನಗಳ ವೇಗ ಕಡಿಮೆಯಾಗಿದ್ದು, ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ಗುರುತಿಸಲಾಗದೆ ಜಾರಿ ಬೀಳುವ ಘಟನೆಗಳು ಸಂಭವಿಸುವ ಭೀತಿಯೂ ಹೆಚ್ಚಾಗಿದೆ.


ಮಳೆ ನೀರು ಗುಂಡಿಗಳಲ್ಲಿ ನಿಂತಿರುವುದರಿಂದ ರಸ್ತೆಯ ನಿಜವಾದ ಸ್ಥಿತಿ ಗೋಚರಿಸದೆ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ರಾತ್ರಿ ವೇಳೆ ರಸ್ತೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿದ್ದು, ಸಣ್ಣ ವಾಹನಗಳ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಪಾದಚಾರಿಗಳಿಗೂ ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ನಡೆಯಲು ಅವಕಾಶವಿಲ್ಲದೆ, ವಾಹನಗಳ ನಡುವೆ ಜೀವಭಯದಿಂದ ಸಂಚರಿಸಬೇಕಾಗಿದೆ. ಮಳೆ ಬಂದಾಗ ಕೆಸರು ಮತ್ತು ನೀರಿನ ನಡುವೆ ನಡೆದು ಹೋಗುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.


ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ದುಃಸ್ಥಿತಿ ಒಂದೆಡೆಯಾದರೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದು ಕೂಡಾ ಸ್ಥಳೀಯರು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ. ರಸ್ತೆಯುದ್ದಕ್ಕೂ ಒಳಚರಂಡಿಯ ಕೊಳಚೆ ನೀರು ರಸ್ತೆಯುದ್ದಕ್ಕೂ ಹರಿದು ಪರಿಸರವಿಡೀ ಗಬ್ಬು ನಾರುತ್ತಿದೆ. ನಗರಸಭೆ ವತಿಯಿಂದ ವಾರದಲ್ಲಿ ಎರಡರಿಂದ ಮೂರು ಬಾರಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ, 

ಹದಗೆಟ್ಟ ರಸ್ತೆಗೆ ತಕ್ಷಣ ತಾತ್ಕಾಲಿಕವಾಗಿ ಜಲ್ಲಿ ಮತ್ತು ಮಣ್ಣು ಹಾಕಿ ಅಪಾಯಕಾರಿ ಗುಂಡಿಗಳನ್ನು ಮುಚ್ಚಬೇಕು. ಸಂಪೂರ್ಣ ರಸ್ತೆಯನ್ನು ಅಗೆದು ಉತ್ತಮ ಗುಣಮಟ್ಟದಲ್ಲಿ ಶಾಶ್ವತ ಡಾಂಬರೀಕರಣ ನಡೆಸಬೇಕು. ಮಳೆ ನೀರು ನಿಲ್ಲದಂತೆ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಿ ರಸ್ತೆಯ ದೀರ್ಘಕಾಲಿಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. 


Ads on article

Advertise in articles 1

advertising articles 2

Advertise under the article