ಕಟಪಾಡಿ: ಡಿವೈಡರ್ ಮೇಲೇರಿದ ಅಂಬ್ಯುಲೆನ್ಸ್: ರೋಗಿ ಸಹಿತ ಪ್ರಯಾಣಿಕರು ಪಾರು
ಮಂಗಳೂರಿನಿಂದ ಉಡುಪಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ರಾಷ್ಟ್ರೀಯ ಹೆದ್ದಾರಿ–66ರ ಕಟಪಾಡಿ ಸಮೀಪದ ಯೇಣಗುಡ್ಡೆ ತೇಕಲ್ ತೋಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ (ಡಿವೈಡರ್) ಮೇಲೇರಿ ಅಪಘಾತಕ್ಕೀಡಾದ ಘಟನೆ ಬುಧವಾರ ಸಂಭವಿಸಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಆಂಬುಲೆನ್ಸ್, ಕಟಪಾಡಿ ಜಂಕ್ಷನ್ ದಾಟಿದ ತಕ್ಷಣ ಯೇಣಗುಡ್ಡೆ ತೇಕಲ್ ತೋಟದ ಡಿವೈಡರ್ ಬಳಿ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ವಾಹನ ಮೊದಲು ರಸ್ತೆ ವಿಭಾಜಕದ ಮೇಲೇರಿ, ಬಳಿಕ ಉಡುಪಿ–ಮಂಗಳೂರು ವಿರುದ್ಧ ದಿಕ್ಕಿನ ರಸ್ತೆಯನ್ನು ದಾಟಿ ಪಕ್ಕಕ್ಕೆ ತೆರಳಿ ನಿಂತಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ವಾಹನ ಸವಾರರು ಧಾವಿಸಿ ಆಂಬುಲೆನ್ಸ್‌ನಲ್ಲಿದ್ದ ಚಾಲಕ, ರೋಗಿ ಹಾಗೂ ಇತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಘಟನೆಯಲ್ಲಿ ಚಾಲಕ ಸೇರಿದಂತೆ ಆಂಬುಲೆನ್ಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗಾಯಾಳುಗಳನ್ನು ತಕ್ಷಣ ಮತ್ತೊಂದು ಆಂಬುಲೆನ್ಸ್ ಮೂಲಕ ಉಡುಪಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ರವಾನಿಸಲಾಯಿತು.
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಳಿಕ ಸಂಚಾರವನ್ನು ಸುಗಮಗೊಳಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.