ಕುಂದಾಪುರ ಶೂಟೌಟ್ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಡೆರಿಕ್ ಗಾಗಿ ತೀವ್ರ ಶೋಧ
Friday, July 31, 2026
ಕುಂದಾಪುರದ ರೋಜಾರಿಯೋ ಚರ್ಚ್ ಬಳಿ ನಡೆದ ಶೂಟೌಟ್ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕನ್ನಡಕುದ್ರು ನಿವಾಸಿ ಡೆರಿಕ್ ಎಂಬಾತ ಹತ್ಯೆ ನಡೆಸಿದ ಆರೋಪ ಎದುರಿಸುತ್ತಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೃತ ರಿಚರ್ಡ್ ಈ ಹಿಂದೆ ನಡೆದ ಪಿಟ್ಟಿ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲು ಶಿಕ್ಷೆ ಅನುಭವಿಸಿ ಬಳಿಕ ಬಿಡುಗಡೆಯಾಗಿದ್ದರು. ಅವರು ಫೈನಾನ್ಸ್ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗುರುವಾರ ಸಂಜೆ ರಿಚರ್ಡ್ ಮತ್ತು ಡೆರಿಕ್ ನಡುವೆ ಮಾತಿನ ಚಕಮಕಿ ನಡೆದು ಅದು ತೀವ್ರ ಜಗಳಕ್ಕೆ ತಿರುಗಿತ್ತು. ಇದೇ ವೈಷಮ್ಯ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅದರ ಮುಂದುವರಿದ ಭಾಗವಾಗಿ ಶುಕ್ರವಾರ ಮುಂಜಾನೆ ಡೆರಿಕ್ ರಿಚರ್ಡ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಘಟನೆಯ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.