ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿಕೊಂಡ ಶಾಸಕ ಯಶ್‌ಪಾಲ್ ಸುವರ್ಣ
ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಬದ್ಧತೆಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದರು.
ಟೀಮ್ ಯಶ್‌ಪಾಲ್ ಸುವರ್ಣ ಉಡುಪಿ ನೇತೃತ್ವದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಸೋಮವಾರ ಉಡುಪಿ ಪುರಭವನದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗಾಂಗ ದಾನವು ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಮತ್ತೊಬ್ಬರ ಬದುಕಿಗೆ ಹೊಸ ಆಶಾಕಿರಣ ನೀಡುವ ಮಹತ್ವದ ಕಾರ್ಯವಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಕೂಡ ಸಮಾಜಮುಖಿ ಹಾಗೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಶಾಸಕ ಯಶ್‌ಪಾಲ್ ಸುವರ್ಣ ಅವರ ಸೇವಾ ಮನೋಭಾವ ಮೆಚ್ಚುವಂತದ್ದು. ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.
ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಅನಂತಪದ್ಮನಾಭ ಸಾಮಗ ಮಾತನಾಡಿ, ಶಾಸಕರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರ ಅರ್ಥಪೂರ್ಣ ಮತ್ತು ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಗೋಕುಲದಾಸ ಕಚ್ಚೂರು, ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್, ಮಲ್ಪೆ ಮತ್ಸ್ಯೋದ್ಯಮಿ ದಯಾನಂದ ಕೆ. ಸುವರ್ಣ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಸುಧಾಕರ ಕುಂದರ್, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಹಾಗೂ ಟೀಮ್ ಯಶ್‌ಪಾಲ್ ಸುವರ್ಣ ಉಡುಪಿಯ ಸಂಚಾಲಕ ಶೇಖರ ಶೆಟ್ಟಿ ಹಿರಿಯಡಕ ಉಪಸ್ಥಿತರಿದ್ದರು.
ಯತೀಶ್ ಕೋಟ್ಯಾನ್ ಸ್ವಾಗತಿಸಿ, ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.