-->
 ಶಾಂತಾ ಕೊಲೆ ಕೇಸ್: ಸರಣಿ ಹಂತಕ ಸೈನೈಡ್ ಮೋಹನ್ ಖುಲಾಸೆ ವಿರುದ್ಧ ಸರ್ಕಾರದ ಅರ್ಜಿ ವಜಾ

ಶಾಂತಾ ಕೊಲೆ ಕೇಸ್: ಸರಣಿ ಹಂತಕ ಸೈನೈಡ್ ಮೋಹನ್ ಖುಲಾಸೆ ವಿರುದ್ಧ ಸರ್ಕಾರದ ಅರ್ಜಿ ವಜಾ


2006ರಲ್ಲಿ ಕೊಲ್ಲೂರಿನಲ್ಲಿ ನಡೆದ ಶಾಂತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಕುಖ್ಯಾತ ಸರಣಿ ಹಂತಕ ಸೈನೈಡ್ ಮೋಹನ್ ಅಲಿಯಾಸ್ ಮೋಹನ್ ಕುಮಾರ್‌ನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಖುಲಾಸೆ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಆರೋಪಿಯ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿಯನ್ನು ಸಮರ್ಪಕವಾಗಿ ಜೋಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ನಿಂತಿರುವ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಎಲ್ಲ ಕೊಂಡಿಗಳೂ ಸ್ಪಷ್ಟವಾಗಿ ಸಾಬೀತಾಗಬೇಕು. ಯಾವುದೇ ಅನುಮಾನ ಉಳಿದಿದ್ದರೆ ಅದರ ಲಾಭವನ್ನು ಆರೋಪಿಗೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಾಸಿಕ್ಯೂಷನ್ ಆರೋಪದ ಪ್ರಕಾರ, ಮಂಗಳೂರಿನ ಕಂಕನಾಡಿ ಸಮೀಪದ ಶಾಂತಾಳಿಗೆ ಮೋಹನ್ ತನ್ನನ್ನು ‘ರಾಜೇಶ್’ ಎಂಬ ನಕಲಿ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ಮದುವೆಯಾಗುವುದಾಗಿ ನಂಬಿಸಿ 2006ರ ನವೆಂಬರ್ 9ರಂದು ಆಕೆಯನ್ನು ಕೊಲ್ಲೂರಿಗೆ ಕರೆದೊಯ್ದಿದ್ದ. ಅಲ್ಲಿನ ಗೆಸ್ಟ್‌ಹೌಸ್‌ನಲ್ಲಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಬಳಿಕ, ಚಿನ್ನಾಭರಣಗಳನ್ನು ಕೊಠಡಿಯಲ್ಲೇ ಇಡುವಂತೆ ಹೇಳಿ ಆಕೆಯನ್ನು ಕೊಲ್ಲೂರು ದೇವಸ್ಥಾನದ ಹಿಂಭಾಗದಲ್ಲಿರುವ ಸ್ವರ್ಣಮುಖಿ ಮಂಟಪದ ಬಳಿಗೆ ಕರೆದೊಯ್ದಿದ್ದ ಎಂದು ಆರೋಪಿಸಲಾಗಿತ್ತು.

ಅಲ್ಲಿ ಗರ್ಭಪಾತದ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದರಿಂದ ಶಾಂತಾ ಮೃತಪಟ್ಟರು. ಬಳಿಕ ಮೋಹನ್ ಗೆಸ್ಟ್‌ಹೌಸ್‌ಗೆ ಮರಳಿ ಆಕೆಯ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.

ಶಾಂತಾಳ ಮೃತದೇಹ ದೇವಸ್ಥಾನದ ಸಮೀಪ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸೈನೈಡ್ ವಿಷಪ್ರಾಶನದ ಸಾಧ್ಯತೆಯ ಬಗ್ಗೆ ವರದಿ ನೀಡಿದ್ದರು. ಬಳಿಕ ಮೃತದೇಹವನ್ನು ಹೂಳಲಾಗಿತ್ತು.

ಶಾಂತಾಳ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದ್ದರು. 2009ರಲ್ಲಿ ಮತ್ತೊಂದು ಪ್ರಕರಣದಲ್ಲಿ ಮೋಹನ್ ಬಂಧನಕ್ಕೊಳಗಾದ ಬಳಿಕ, ತನಿಖೆಯ ವೇಳೆ ಶಾಂತಾ ಕೊಲೆ ಪ್ರಕರಣದಲ್ಲೂ ಆತನ ಪಾತ್ರ ಬೆಳಕಿಗೆ ಬಂದಿತ್ತು ಎಂದು ಪ್ರಾಸಿಕ್ಯೂಷನ್ ತಿಳಿಸಿತ್ತು.

ನಂತರ ಪ್ರಕರಣದ ಮರುತನಿಖೆಗಾಗಿ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗಿತ್ತು. ಆದರೆ, ಮೃತದೇಹ ಸಂಪೂರ್ಣ ಕೊಳೆತುಹೋಗಿದ್ದ ಹಿನ್ನೆಲೆಯಲ್ಲಿ ಸೈನೈಡ್ ಸೇವನೆಯಿಂದಲೇ ಸಾವು ಸಂಭವಿಸಿದೆ ಎಂಬುದನ್ನು ಖಚಿತವಾಗಿ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ.

ಇದೇ ವೇಳೆ, ಶಾಂತಾಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪಕ್ಕೂ ಪ್ರಾಸಿಕ್ಯೂಷನ್ ಸಮರ್ಪಕ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.

ಹೀಗಾಗಿ, ಆರೋಪಿಯ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಸರಪಳಿ ಸಂಪೂರ್ಣವಾಗಿಲ್ಲ ಎಂದು ತೀರ್ಮಾನಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ಎತ್ತಿಹಿಡಿದು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆ.

Ads on article

Advertise in articles 1

advertising articles 2

Advertise under the article