-->
ಕಡಿಯಾಳಿ ಗಣೇಶೋತ್ಸವಕ್ಕೆ ವಜ್ರಮಹೋತ್ಸವದ ಸಂಭ್ರಮ: ಸೆ.14ರಿಂದ ಏಳು ದಿನಗಳ ವೈಭವದ ಆಚರಣೆ

ಕಡಿಯಾಳಿ ಗಣೇಶೋತ್ಸವಕ್ಕೆ ವಜ್ರಮಹೋತ್ಸವದ ಸಂಭ್ರಮ: ಸೆ.14ರಿಂದ ಏಳು ದಿನಗಳ ವೈಭವದ ಆಚರಣೆ



60ನೇ ವರ್ಷದ ವಜ್ರಮಹೋತ್ಸವ ಆಚರಿಸುತ್ತಿರುವ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆ.14ರಿಂದ 20ರವರೆಗೆ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.


ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.13ರಂದು ಸಂಜೆ 4.30ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ಗಣೇಶನ ಮೂರ್ತಿಯನ್ನು ಕಡಿಯಾಳಿಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು. ಜೋಡುಕಟ್ಟೆಯಲ್ಲಿ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಶಶಿಕಿರಣ್ ಉಮಾಕಾಂತ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.

ವಜ್ರಮಹೋತ್ಸವದ ಅಂಗವಾಗಿ ಭವ್ಯ ರಾಜದರ್ಬಾರ್ ವೇದಿಕೆ ನಿರ್ಮಿಸಲಾಗಿದ್ದು, ಸೆ.14ರಿಂದ ನಿರಂತರ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.20ರಂದು ಭವ್ಯ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಮಲ್ಪೆ ಸಮುದ್ರ ಕಿನಾರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಲಿದೆ ಎಂದು ತಿಳಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿ ಜಿಲ್ಲೆಯ ಪ್ರಥಮ ಗಣಪನ ಪ್ರತಿಷ್ಠಾಪನೆಗಾಗಿ ರಾಜದರ್ಬಾರ್ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಭಕ್ತಿ ಮತ್ತು ಶ್ರದ್ಧೆಗೆ ಆದ್ಯತೆ ನೀಡಿರುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಸಿನಿಮಾ ಗೀತೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಕಡಿಯಾಳಿಯನ್ನು ಸಂಪರ್ಕಿಸುವ ನಾಲ್ಕು ಕಡೆ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಪ್ಲೆಕ್ಸ್, ಬ್ಯಾನರ್, ಕೇಸರಿ ಧ್ವಜ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದರು.

ವಜ್ರಮಹೋತ್ಸವದ ಅಂಗವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ. ಆಸರೆ ಟ್ರಸ್ಟ್ ಮೂಲಕ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಸೆ.14ರಂದು ಭಜನೆ, ದರ್ಪಣ ಡಾನ್ಸ್ ಗ್ರೂಪ್‌ನಿಂದ ನೃತ್ಯ ಕಾರ್ಯಕ್ರಮ, ಅಂಬಯ್ಯ ನುಲಿ ಹಾಗೂ ಚಿದಾನಂದ ನುಲಿ ಅವರಿಂದ ವಚನ ಸಾಹಿತ್ಯ ಮತ್ತು ಭಕ್ತಿಗೀತೆ, ಕಡಿಯಾಳಿ ಮಹಿಳಾ ಮಂಡಳಿಯಿಂದ ತುಳುನಾಡ ವೈಭವ ನಡೆಯಲಿದೆ.

ಸೆ.15ರಂದು ಯೂಟ್ಯೂಬ್ ‘ಚರಿತಾ’ ತಂಡದ ಚಂದನಾ ಮುರಳೀಧರ್ ಮತ್ತು ಸುಪ್ರೀತಾ ಪ್ರದೀಪ್ ಅವರ ಗಾಯನ ಹಾಗೂ ಅಂಬಾ ಭವಾನಿ ಆರ್ಟ್ಸ್‌ನಿಂದ ‘ದೇವಿ ಮಹಾತ್ಮೆ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.16ರಂದು ಬನ್ನಂಜೆ ಕಲಾಕೇಂದ್ರದಿಂದ ಭರತನಾಟ್ಯ ಹಾಗೂ ಸುಧೀರ್ ಕೊಡವೂರು ಬಳಗದಿಂದ ‘ನಾರಸಿಂಹ’ ನೃತ್ಯರೂಪಕ ನಡೆಯಲಿದೆ. ಸೆ.17ರಂದು ವಿವಿಧ ಭಜನಾ ತಂಡಗಳಿಂದ ರಾಜ್ಯಮಟ್ಟದ ಕುಣಿತ ಭಜನೆ ಹಾಗೂ ಆಹ್ವಾನಿತ ಕಲಾವಿದರ ಕುಣಿತ ಭಜನಾ ಸ್ಪರ್ಧೆ ಮತ್ತು ಬಹುಮಾನ ವಿತರಣೆ ನಡೆಯಲಿದೆ.

ಸೆ.18ರಂದು ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಹಾಗೂ ರಾತ್ರಿ 8.30ರಿಂದ ವಿಶೇಷ ರಂಗಪೂಜೆ ನಡೆಯಲಿದೆ.

ಸೆ.19ರಂದು ವಿಶೇಷ ಗಣಹೋಮ, ಅನ್ನಸಂತರ್ಪಣೆ ಹಾಗೂ ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಉಡುಪಿ ನಗರ ವ್ಯಾಪ್ತಿಯ 100ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಗೌರವಿಸಲಾಗುವುದು. ಬಳಿಕ ‘ಮಂತ್ರದೇವತೆ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಚಿನ್ನದ ಕಿರೀಟ, ಪಾಶಾಂಕುಶ ಸೇರಿದಂತೆ ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟ ಗಣಪತಿ ಮೂರ್ತಿಯನ್ನು ಇಂದಿರಾನಗರದ ಎಂಜಿನಿಯರ್ ಸಂಪತ್ ರಾವ್ ಅವರು ರಚಿಸಿದ್ದಾರೆ. ಭಕ್ತರ ವಾಹನಗಳಿಗಾಗಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ, ಯು. ಕಮಲಾಬಾಯಿ ಪ್ರೌಢಶಾಲೆ ಹಾಗೂ ಕುಂಜಿಬೆಟ್ಟು ಬಿಜೆಪಿ ಜಿಲ್ಲಾ ಕಚೇರಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ರಾಘವೇಂದ್ರ ಕಿಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪ.ವಸಂತ ಭಟ್, ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ ಅಂಚನ್, ನಗರಸಭೆ ಮಾಜಿ ಸದಸ್ಯೆ ಗೀತಾ ಶೇಟ್ ಹಾಗೂ ಸಮಿತಿ ಸದಸ್ಯ ಸತೀಶ ಕುಲಾಲ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article