ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ವತಿಯಿಂದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಶಿಕ್ಷಕರ ದಿನಾಚರಣೆ
ಶಿಕ್ಷಕರು ವಿದ್ಯಾರ್ಥಿಗಳನ್ನು ಮಾನವರನ್ನಾಗಿ ರೂಪಿಸುವ ಸಮಾಜದ ಶಿಲ್ಪಿಗಳು, ಅವರ ವೃತ್ತಿ ಎಲ್ಲದಕ್ಕಿಂತ ಹೆಚ್ಚು ಪವಿತ್ರವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್ ಲೂವಿಸ್ ಹೇಳಿದರು.
ಅವರು ಶನಿವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಇದರ ವತಿಯಿಂದ ಆಯೋಜಿಸಿದ್ದ ಧರ್ಮಪ್ರಾಂತ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಕಲಿಯುವುದು ಎಂದರೆ ಕೇವಲ ಜ್ಞಾನ ಸಂಪಾದನೆಯಲ್ಲ ಬದಲಾಗಿ ಮಾನವನ ಜೀವನದಲ್ಲಿ ದಯೆ ಕರುಣೆ ಮತ್ತು ಮಾನವೀಯತೆಯನ್ನು ರೂಪಿಸುವ ಸಾಧನ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕುತೂಹಲವೆಂಬ ಬೀಜಗಳನ್ನು ಬಿತ್ತಿ ಇದರಿಂದ ಉತ್ತಮ ನಾಗರಿಕನೆಂಬ ಫಲವನ್ನು ನೀಡುವ ಮಹಾನ್ ಕೆಲಸ ನಿರ್ವಹಿಸುತ್ತಾರೆ. ಶಿಕ್ಷಕರ ದಿನಾಚರಣೆಯೆಂದರೆ ಕೇವಲ ವೃತ್ತಿಯನ್ನು ಮಾತ್ರವಲ್ಲ ಅವರ ಧ್ಯೇಯವನ್ನು ನೆನಪಿಸುವುದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇದರ ಪ್ರಾಂಶುಪಾಲ ಹಾಗೂ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಡಾ. ಅಶೋಕ್ ಕಾಮತ್ ಮಾತನಾಡಿ ಶಿಕ್ಷಕರು ತಮ್ಮ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿಯನ್ನು ಮೂಡಿಸುತ್ತಾರೆ. ಸವಾಲುಗಳನ್ನು ಸ್ವೀಕರಿಸಿ ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುತ್ತಾರೆ. ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳ ಲಭ್ಯತೆ ತರಗತಿ ಕೋಣೆಗೆ ತಲುಪಿರುವುದು ಅಪಾಯಕಾರಿ ಸಂಗತಿಯಾಗಿದೆ. ಇಂತಹ ಸಂಕೀರ್ಣ ಸಮಸ್ಯೆಗಳಿಂದ ವಿದ್ಯಾರ್ಥಿಗಳನ್ನು ಪ್ರೀತಿಯ ಮೂಲಕ ಗೆದ್ದು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಗುವಿನ ಕುರಿತು ಪ್ರೀತಿ, ಭೋಧಿಸುವ ವಿಷಯದ ಮೇಲೆ ಪ್ರೀತಿ ಹಾಗೂ ಕೆಲಸ ಮಾಡುವ ಶಾಲೆಯ ಕುರಿತು ತೋರುವ ಪ್ರೀತಿ ಒರ್ವ ಉತ್ತಮ ಶಿಕ್ಷಕನಾಗಲು ಸಾಧ್ಯವಿದೆ. ಶಿಕ್ಷಕರ ಮೇಲೆ ಇಂದು ಸಮಾಜದ ನಿರೀಕ್ಷೆ ಹೆಚ್ಚಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಗಮನ ಹರಿಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಕಥೊಲಿಕ್ ಎಜುಕೇಶನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳ ನಿವೃತ್ತ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳಿಗೆ, ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅತ್ಯಧಿಕ ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲಾಯಿತು.
ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಸಾಧನೆ ತೋರಿದ ಕ್ಯಾಪ್ಟನ್ ಶೈನಿ ಆಸ್ಮಾ ಸಲ್ಡಾನರನ್ನು ಗೌರವಿಸಲಾಯಿತು.
ಕಥೊಲಿಕ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿ, ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಕಲ್ಯಾಣಪುರ ಇದರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ವಂದಿಸಿದರು. ಸುರೇಶ್ ಹೆಗ್ಡೆ ಮತ್ತು ಲೊಯ್ಲ್ಸಿಸ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

